Posts Tagged ‘vasudeva rao’

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ವಿವಿಧ ಪ್ರದೇಶಗಳಿಗೆ ಸೇರಿದ 10 ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಉಡುಪಿ ತಾಲೂಕು ಕಚೇರಿ ಬಳಿಯ ಕೆನರಾ ಟವರ್ಸ್ ನಲ್ಲಿರುವ ಜೆಡಿಎಸ್ ಪಕ್ಷದ ಉಡುಪಿ ಬ್ಲಾಕ್ ಕಚೇರಿಯ ಸಭಾಂಗಣದಲ್ಲಿ ನಡೆಸ ಸರಳ ಸಮಾರಂಬದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಯು.ಆರ್ ಸಭಾಪತಿ ಹಾಗೂ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್ ಇವರು ಪಕ್ಷದ ಬಾವುಟವನ್ನು ನೂತನ ಕಾರ್ಯಕರ್ತರಿಗೆ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಕಾರ್ಯಾಧ್ಯಕ್ಷ ಸುರೇಶ್ ಸುವರ್ಣ, ನೇಕಾರರ ಘಟಕದ ಜಿಲ್ಲಾಧ್ಯಕ್ಷ ದಿವಾಕರ ಸಾಲಿಯಾನ್, ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಉಮ್ಮರ್ ಫಾರೂಕ್, ಉಡುಪಿ ಬ್ಲಾಕ್ ಅಧ್ಯಕ್ಷ ಜಯಕುಮಾರ್ ಪರ್ಕಳ, ಕಾರ್ಯದರ್ಶಿ ಮುಹಮ್ಮದ್ ಮಾರ್ಪು, ಮಾಜಿ ತಾ.ಪಂ.ಸದಸ್ಯ ವಸಂತ ಮರ್ಣೆ, ಶೇಖ್ ಅಹಮ್ಮದ್ ಪಡುಬಿದ್ರಿ, ಶ್ರೀಮತಿ ಸುನಿತಾ ಲೋಕನಾಥ ಕೋಟ್ಯಾನ್ ಕೀಳಿಂಜೆ ಹಾಗೂ ಹರೀಶ್ ಕೋಟ್ಯಾನ್ ಕೀಳಿಂಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಶಿಧರ ಅಮೀನ್ ವಡಭಾಂಡೇಶ್ವರ, ಶ್ರೀಮತಿ ಚಂದ್ರಾವತಿ ಕೊಡವೂರು, ಪ್ರಭಾಕರ ಆಚಾರಿ ಬಡಾನಿಡಿಯೂರು, ಸುರೇಶ್ ಕೋಟ್ಯಾನ್, ಶ್ರೀಧರ ಆಚಾರ್ಯ ಗರಡಿಮಜಲು, ಶಶಿಧರ ಗರಡಿಮಜಲು, ಶಶಿಕುಮಾರ್ ಗರಡಿಮಜಲು, ಸುರೇಶ್ ವಡಭಾಂಡೇಶ್ವರ, ಶೇಖರ ಅಮೀನ್ ವಡಭಾಂಡೇಶ್ವರ ಹಾಗೂ ಹರೀಶ್ ವಡಭಾಂಡೇಶ್ವರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಉಡುಪಿ: ಬರಹಗಾರ್ತಿ ಕಾತ್ಯಾಯಿನಿ ಕುಂಜಿಬೆಟ್ಟು ಅವರ ಮೊದಲ ಕವನ ಸಂಕಲನ ‘ನೀನು’ ಇದರ ಬಿಡುಗಡೆ ಸಮಾರಂಭ ಜುಲೈ 6 ರಂದು ಸಂಜೆ ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.
ಚಿಂತಕಿ ವೀಣಾ ಬನ್ನಂಜೆ ಸಂಕಲನವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಹೃದಯ ಸ್ಪಂದನ ಕೊಡೋ ಪುಸ್ತಕಗಳು ಇಲ್ಲವಾದ ಕಾರಣ ನಾನು ಯಾರ, ಯಾವ ಪುಸ್ತಕಗಳನ್ನೂ ಓದುತ್ತಿಲ್ಲ. ಈ ಸಭೆಲಿ ಉಪಸ್ಥಿತರಿರುವ ವೈದೇಹಿಯವರ ಪುಸ್ತಕಗಳನ್ನು ಸಹ ನಾನು ಓದಿಲ್ಲ. ಸಭೆ, ಸಮಾರಂಭಗಳು ವಾದ, ಕುತರ್ಕ, ಹೊಟ್ಟೆ ಕಿಚ್ಚಿನ
ವೇದಿಕೆಗಳಾಗುತ್ತಿರುವುದರಿಂದ ಮತ್ತು ಒಬ್ಬರನ್ನು ಮತ್ತೊಬ್ಬರು ಹೊಗಳುವ, ಮೆಚ್ಚಿಸುವ, ಲೇವಡಿ ಮಾಡುವ, ವೈಯುಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವ, ಉಧೋ ಉಧೋ ಮಾಡುವ ಸಮಾರಂಭಗಳೇ ಆಗಿರುವುದರಿಂದ ನಾನು ಸಭೆಗಳಲ್ಲೂ ಹೆಚ್ಚಾಗಿ ಭಾಗವಹಿಸುವುದಿಲ್ಲ. ಎಲ್ಲದರಿಂದಲೂ ಹಿಂದಕ್ಕೆಳೆದುಕೊಮಡಿದ್ದೇನೆ ಎಂದು ಹೇಳಿದರು.
ಮನುಷ್ಯ ಮೊದಲು ತನ್ನ ಒಳ ಜಗತ್ತನ್ನು ವಿಸ್ತರಿಸುವ ಕೆಲಸ ಮಾಡಬೇಕು. ನಾನು ನಾನಲ್ಲ ಎನ್ನುವ ಎಚ್ಚರದ ಕಡೆಗೆ ನಮ್ಮ ಬರಹ ನಮ್ಮನ್ನು ಕೊಂಡೊಯ್ಯಬೇಕು. ಪುರುಷ ಮತ್ತು ಪ್ರಕೃತಿ ಒಂದಾಗದಿದ್ದರೆ ಉತ್ತಮ ಬರಹ ಅಸಾಧ್ಯ ಎಂದು ತಿಳಿಸಿದ ವೀಣಾ ಬನ್ನಂಜೆ, ದಾರ್ಶನಿಕರು ಹಿಂದೆಯೇ ಚಂದ್ರನಲ್ಲಿಗೆ ಕಾಲಿಡದೆ ಚಂದ್ರ ತಂಪು ಅಂದಿದ್ದರು. ವಿಜ್ಙಾನಿಗಳು ಇಂದು ಚಂದ್ರನಲ್ಲಿಗೆ ಹೋಗಿ ಬಂದು ಚಂದ್ರನಲ್ಲಿ ಚಳಿ ಇದೆ
ಅನ್ನುತ್ತಿದ್ದಾರೆ. ನ್ಯೂಟ್ರಲ್ ಜಂಡರ್ ನಲ್ಲಿ ಜಗತ್ತನ್ನು ನೋಡಬೇಕೆಂಬುದು ನನ್ನ ಆಶಯ. ಮನುಷ್ಯನಿಗೆ ನಾಲ್ಕನೇ ಸ್ಥಿತಿಯಲ್ಲಿರೋದು ಸಾಧ್ಯವಿದೆ. ಅದು ಮಗುವಿನ ಸ್ಥಿತಿ. ಮನುಷ್ಯ ಲಿಂಗಾತೀತ, ಕಾಲಾತೀತ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬರಹಗಾರ್ತಿ ವೈದೇಹಿ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಡಾ.ಪಾರ್ವತಿ ಜಿ. ಐತಾಳ್ ಕೃತಿ ಪರಿಚಯಿಸಿದರು. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನದ ರಾಜೀವಲೋಚನ, ಕವಯತ್ರಿ ಕಾತ್ಯಾಯಿನಿ, ಡಾ.ಎಚ್.ಶಾಂತಾರಾಮ್, ತಲ್ಲೂರು ಶಿವರಾಮ, ಶೆಟ್ಟಿ ಹಾಗೂ ಪಿ.ವಾಸುದೇವ ರಾವ್ ಉಪಸ್ಥಿತರಿದ್ದರು. ಕವಯತ್ರಿ ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.
ಕೃತಿ ಬಿಡುಗಡೆ ಸಮಾರಂಭದ ಬಳಿಕ ಹೆಗ್ಗೋಡಿನ ಜನಮನದಾಟದವರು ಅಭಿನಯಿಸಿದ
ಡಾ.ಸಿದ್ಧಲಿಂಗಯ್ಯನವರ ಆತ್ಮಕಥೆಯನ್ನಾಧರಿಸಿದ, ಎಂ.ಗಣೇಶ್ ನಿರ್ದೇಶಿಸಿದ ‘ಊರು ಕೇರಿ’ ನಾಟಕ ಪ್ರದರ್ಶನ ನಡೆಯಿತು. ರಂಗಭೂಮಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು. ವರದಿ: ಶ್ರೀರಾಮ ದಿವಾಣ.

ಉಡುಪಿ: ಕಾಂಗ್ರೆಸ್ ನ ಮಾಜಿ ಶಾಸಕ ಯು.ಆರ್.ಸಭಾಪತಿ ಫೆ.4 ರಂದು ಉಡುಪಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್, ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮುಹಮ್ಮದ್, ಮಹಿಳಾ ಜೆಡಿಎಸ್ ನ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಸಮಕ್ಷಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮರ್ಣೆ ವಸಂತ ಪೂಜಾರಿ ಸಹಿತ ಇಬ್ಬರು ಮಾಜಿ ತಾ.ಪಂ.ಸದಸ್ಯರು, ಉಡುಪಿ ಬ್ಲಾಕ್ ಕಾಂಗ್ರಸ್ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಸಹಿತ ಇತರ ಕೆಲವು ಮಂದಿ ಪ್ರಮುಖರು ಸಭಾಪತಿ ಜೊತೆಗೆ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ.
ಮುಂದಕ್ಕೆ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ ಕಾರಣ ಹಾಗೂ ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ತಕ್ಷಣದಿಂದ ನೇಮಕ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಭಾಪತಿ ಜೆಡಿಎಸ್ ಸೇರ್ಪಡೆಯಾಗಲು ನಿರ್ಧರಿಸಿದರು ಎಂದು ಹೇಳಲಾಗಿದೆ.
ಕಳೆದ ವರ್ಷವೇ ಸಭಾಪತಿ ಜೆಡಿಎಸ್ ಸೇರಲು ತೀರ್ಮಾನಿಸಿದ್ದರು. ಇದಕ್ಕಾಗಿ ಅಭಿಮಾನಿಗಳ ಸಭೆಯನ್ನೂ ನಡೆಸಿದ್ದರು. ಮರಳಿ ರಾಜಕೀಯ ವರ್ಚಸ್ಸು ಗಳಿಸುವ ಉದ್ದೇಶದೊಂದಿಗೆ ಈ ಸಂದರ್ಭದಲ್ಲಿ ಯುಪಿಸಿಎಲ್ ವಿರೋಧಿ ಹೋರಾಟವನ್ನು ಸಭಾಪತಿ ಆರಂಬಿಸಿದ್ದರು. ಆದರೆ ಈ ಹೋರಾಟವೇ ಸಭಾಪತಿ ಜೆಡಿಎಸ್ ಸೇರುವ ಕಾರ್ಯಕ್ರಮಕ್ಕೆ ತಡೆಯಾಗಿ ಪರಿಣಮಿಸಿತು ಎನ್ನಲಾಗಿದೆ.
ಡಾ.ವಿ.ಎಸ್.ಆಚಾರ್ಯ ಜೊತೆ ನಿಕಟ ಬಾಂಧವ್ಯ ಹೊಂದಿದ್ದ ಸಭಾಪತಿ ಒಂದು ಹಂತದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು ಸಭಾಪತಿಯವರ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಸಭಾಪತಿಯವರ ಬಿಜೆಪಿ ಸೇರ್ಪಡೆ ಸಾಧ್ಯವಾಗಿರಲಿಲ್ಲ.
ಇದೀಗ ಆಚಾರ್ಯರು ನಿಧನರಾದ ಹಿನ್ನೆಲೆಯಲ್ಲಿ ಇನ್ನು ಬಿಜೆಪಿ ಸೇರ್ಪಡೆ ಅಸಾಧ್ಯ ಎಂಬುದನ್ನು ಮನಗಂಡ ಯು.ಆರ್.ಸಭಾಪತಿ ಅಂತಿಮವಾಗಿ ಜೆಡಿಎಸ್ ಸೇರುವ ಮೂಲಕ ಮತ್ತೆ ತನ್ನ ರಾಜಕೀಯ ಭವಿಷ್ಯವನ್ನು ಕಂಡುಕೋಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.