Posts Tagged ‘st.mery's island’

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಲ್ಲಿ ಪ್ರವಾಸೋದ್ಯಮದ ಅಭಿವೃದ್ದಿ ಎಂಬ ಹೆಸರಲ್ಲಿ ಕಾಮಕೇಳಿ, ಮದ್ಯ ಸೇವನೆ, ಡ್ರಗ್ ಎಡಿಕ್ಷನ್, ಅರೆ ಬೆತ್ತಲೆ ತಾಂಡವ ನರ್ತನ ಇತ್ಯಾದಿಗಳೆಲ್ಲವೂ ನಡೆಯಿತು. ಮಾಧ್ಯಮಗಳು ಸತ್ಯವನ್ನು ಬಿಂಬಿಸಿವೆ. ಈ ರೇವ್ ಪಾರ್ಟಿಗೆ 6000 ಜನ ಸೇರಿದ್ದರು. ಇವರಲ್ಲಿ 400 ಮಂದಿ ವಿದೇಶಿಯರು. ಆದರೆ, ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಯಾವುದೇ ಅಹಿತಕರ ಘಟನೆಗಳೂ ನಡೆದಿಲ್ಲ ಅನ್ನುತ್ತಾರೆ, ಮಾಧ್ಯಮಗಳಲ್ಲಿ ಬಂದಂತೆ ಏನೂ ನಡೆದಿಲ್ಲ ಅಂತಾರೆ. ಮುಖ್ಯಮಂತ್ರಿಗಳ ಕೈಕೆಳಗೆ ಇಂಟೆಲಿಜೆಂಟ್ಸ್ ಇದೆ, ಜಿಲ್ಲಾಡಳಿತ ಇದೆ. ಇಷ್ಟೆಲ್ಲಾ ಇದ್ದೂ ಏನೂ ಆಗಿಲ್ಲವೆಂದು ಹೇಳಿಕೆ ನೀಡಿ ಜನರನ್ನು ಮೋಸ ಮಾಡುತ್ತಿದ್ದಾರೆ ಮುಖ್ಯಮಂತ್ರಿ. ಮೋಸ ಮಾಡುವುದನ್ನೆ ಕೆಲಸ ಮಾಡಿಕೊಂಡಿರುವ, ರಾಜ್ಯಭಾರ ಮಾಡಲು ಗೊತ್ತಿಲ್ಲದ ಸದಾನಂದ ಗೌಡರು ಕುರ್ಚಿ ಬಿಟ್ಟು ಕೆಳಗಿಳಿಯಲಿ ಎಂದು ಕಾಂಗ್ರೆಸ್ ನಾಯಕ, ಮಾಜೆ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆಸಿದ ಮಾಧ್ಯಮಗೊಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ಮಾತೃ ದೇವೋಭವ, ಭಾರತ ಮಾತೆ ಇತ್ಯಾದಿ ಹೇಳುತ್ತಾ, ದ್ವೀಪದ ಪವಿತ್ರತೆಯನ್ನು, ಸಂಸ್ಕೃತಿಯನ್ನು ಧ್ವಂಸ ಮಾಡಿ ಅಕ್ಷಮ್ಯ ಅಪರಾಧವೆಸಗಲಾಗಿದೆ. ಇದಕ್ಕಾಗಿ ಸದಾನಂದ ಗೌಡರಿಗೆ ಶಹಬ್ಬಾಸ್ ಗಿರಿ ಕೊಡಬೇಕು ಎಂದು ವ್ಯಂದ್ಯವಾಡಿದರು.
ಪ್ರವಾಸೋದ್ಯಮದ ಅಭಿವೃದ್ದಿಗೆ ಅರೆ ಬೆತ್ತಲೆ ನೃತ್ಯ ನಡೆಸಿ ಹಣ ಸಂಗ್ರಹಿಸಬೇಕೇ, ಸರಕಾರದಲ್ಲಿ ಹಣ ಇಲ್ಲವೇ ಎಂದು ಪ್ರಶ್ನಿಸಿದ ಜನಾರ್ಧನ ಪೂಜಾರಿಯವರು, ರೇವ್ ಪಾರ್ಟಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಡಿಸಿ ಮಲಗಿದ್ರಾ, ಸರಕಾರ ನಿದ್ದೆ ಮಾಡ್ತಿತ್ತಾ ಎಂದು ಚಾಟಿ ಬೀಸಿದರು.
ಇದನ್ನು ಸುಮ್ಮನೇ ಬಿಡುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬರಲಿರುವ ಉಡುಪಿ – ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಗೆ ಚುನಾವಣಾ ವಿಷಯವಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದರು. ರೇವ್ ಪಾರ್ಟಿ ನಡೆಯುತ್ತಿರುವಾಗ ಮುಖ್ಯಮಂತ್ರಿಗಳು ಉಡುಪಿಗೆ ಆಗಮಿಸಿದ್ದಾರೆ, ಕೇವಲ 8 ಕಿ.ಮೀ.ದೂರದ ಐಲ್ಯಾಂಡ್ ಗೆ ಹೋಗಿ ನೋಡುತ್ತಿದ್ದರೆ ಮುಖ್ಯಮಂತ್ರಿಗಳಿಗೆ ಅಲ್ಲೇನು ನಡೆಯುತ್ತಿತ್ತು ಎಂದು ಗೊತ್ತಾಗುತ್ತಿತ್ತು. ಐಲ್ಯಾಂಡ್ ಗೆ ಡ್ರಗ್ ಸಪ್ಲೈ ಮಾಡಿದ್ದು ಯಾರು, ಸಂಗ್ರಹವಾದ ಹಣವೆಷ್ಟು ಇತ್ಯಾದಿಗಳಿಲ್ಲವನ್ನೂ ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಹರಿಕೃಸ್ಣ ಬಂಟ್ವಾಳ, ಎಂ.ಎ.ಗಫೂರ್, ಕೀರ್ತಿ ಶೆಟ್ಟಿ, ಸರಳಾ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.