Posts Tagged ‘rss’

ಉಡುಪಿ: ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ, ಬಿಜೆಪಿಯ ಸ್ಥಳೀಯ ನಾಯಕ ಚಿತ್ತರಂಜನ್ ದಾಸ್ ಹೆಗ್ಡೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಲ್ಲಿನ ಹಿರಿಯ ನಾಯಕರು ಬಿಜೆಪಿ ಬಗ್ಗೆ ಎಷ್ಟೊಂದು ಭ್ರಮನಿರಸಗೊಂಡಿದ್ದಾರೆ ಎನ್ನುವುದಕ್ಕೆ ಹೆಗ್ಡೆಯವರೇ ಸಾಕ್ಷಿ ಎಂದು ಉಡುಪಿ ವಿಧನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.22 ರಂದು ಮಾಧ್ಯಮಗೋಷ್ಟಿಯಲ್ಲಿ, ಭವಿಷ್ಯದ ಉಡುಪಿಗೊಂದು ನೀಲ ನಕಾಶೆ ‘ವಿಷನ್ ಉಡುಪಿ- 2025′ ನ್ನು ಬಿಡುಗಡೆಗೊಳಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ದೇಶದಲ್ಲೇ ಉಡುಪಿಯನ್ನು ಮಾದರಿ ಕ್ಷೇತ್ರವನ್ನಾಗಿ ಮಡುವುದಾಗಿ ಈ ಸಂದರ್ಭದಲ್ಲಿ ಪ್ರಮೋದ್ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಚಿತ್ತರಂಜನ್ ದಾಸ್ ಹೆಗ್ಡೆ, ತಾನು ಜನಸಂಘದ ಕಾಲದಿಂದ ಇಂದಿನ ಬಿಜೆಪಿವರೆಗೂ ಕಳೆದ 38 ವರ್ಷಗಳಿಂದಲೂ ಸಕ್ರಿಯ ಕಾರ್ಯಕರ್ತ. ಪಕ್ಷದಲ್ಲಿನ ಇತ್ತೀಚೆಗಿನ ವರ್ತನೆಗಳಿಂದ ತನಗೆ ನೋವಾಗಿದೆ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಭ್ರಷ್ಟಾಚಾರ ವ್ಯಾಪಕವಾಗಿದೆ. ಬಿಜೆಪಿಯಲ್ಲಿನ ಪಂಚನಿಷ್ಠೆ ಯಾರಿಗೂ ಇಲ್ಲವಾಗಿದೆ. ಆಪರೇಷನ್ ಕಮಲದ ಮೂಲಕ ಪ್ರಜಾತಂತ್ರ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಬಿಜೆಪಿ ಕಗ್ಗೊಲೆ ಮಾಡಿದೆ. ಇದೀಗ ಯಾವುದೇ ಫಲಾಪೇಕ್ಷೆ ಇಲ್ಲದೆ ರೆಸಾರ್ಟ್ ಸಂಸ್ಖೃತಿ ಮತ್ತು ಪರಸ್ಪರ ಕೆಸರೆರಚಾಟದಲ್ಲೇ ಐದು ವರ್ಷ ಮುಗಿಸಿದೆ. ಇದೇ ಮುಜುಗರದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿಲ್ಲ ಎಂದು ತಿಳಿಸಿದರು.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದಾಗಿ ಚಿತ್ತರಂಜನ್ ದಾಸ್ ಹೆಗ್ಡೆ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ವಿಲೆಪಾರ್ಲೆ ಕ್ಷೇತ್ರದ ಶಾಸಕ ಕೃಷ್ಣ ಹೆಗ್ಡೆ, ಪಕ್ಷದ ನಾಯಕರಾದ ಪಿ.ಲಕ್ಷ್ಮಣ ಶೆಣೈ, ಯತೀಶ್ ಕರ್ಕೇರ, ಮೀನಾಕ್ಷಿ ಮಾಧವ ಬನ್ನಂಜೆ, ಬಿರ್ತಿ ರಾಜೇಶ್ ಶೆಟ್ಟಿ, ಅಮೃತ್ ಶೆಣೈ, ಗಣೇಶ್ ನೆರ್ಗಿ, ದಿವಾಕರ ಕುಂದರ್, ಪ್ರತಾಪ್ ಹೆಗ್ಡೆ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಉಡುಪಿಯ ಚುನಾವಣಾ ಕರ್ಚಿಗಾಗಿ ಅಕ್ರಮವಾಗಿ ಹಣ ತರುತ್ತಿದ್ದ ಉಡುಪಿಯ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಧಾರವಾಡದಲ್ಲಿ ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಎ.19 ರಂದು ಬೆಳಗ್ಗೆ ತಪಾಸಣೆಯ ಸಮಯದಲ್ಲಿ ಒಂದು ಕೋಟಿ ರು. ಅಕ್ರಮ ಹಣ ಪತ್ತೆಯಾಯಿತು. ವಿಚಾರಣೆಯ ಸಮಯದಲ್ಲಿ ಆರೋಪಿಗಳು ಈ ಹಣ ತಮ್ಮ ಫೆಡರೇಶನಿಗೆ ಸಂಬಂಧಿಸಿದ ಹಣ ಎಂದು ಹೇಳಿ ಪ್ರಕರಣ ಮುಚ್ಚಿ ಹಾಕಲು ಶ್ರಮಿಸಿದರಾದರೂ ಪ್ರಯೋಜನವಾಗಲಿಲ್ಲ.
ಆರೋಪಿಗಳು ಉಡುಪಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು ಮತ್ತು ಈ ಅಕ್ರಮ ಹಣವನ್ನು ಉಡುಪಿಯ ಚುನಾವಣಾ ಕರ್ಚಿಗಾಗಿ ಧಾರವಾಢದಿಂದ ಸಾಗಿಸಲುತ್ತಿದ್ದರು ಎಂಬುದು
ಮೇಲ್ನೋಟಕ್ಕೆ ಸಾಬೀತಾಯಿತು ಎನ್ನಲಾಗಿದೆ.
ಆರೋಪಿಗಳಿಬ್ಬರನ್ನು ಬಂಧಿಸಿದ ಪೊಲೀಸರು ರಾತ್ರಿ ಜಾಮೀನಿನ ಮೇಲೆ
ಬಿಡುಗಡೆಗೊಳಿಸಲಾಯಿತು ಎಂದು ಹೇಳಲಾಗಿದೆ. ಈ ಪ್ರಕರಣ ಇದುವರೆಗೂ ಉಡುಪಿಯಲ್ಲಿ ಪ್ರಚಾರಕ್ಕೆ ಬರದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಉಡುಪಿ: ಬಿಜೆಪಿಯ ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷನಾಗಿ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ 20 ವರ್ಷಗಳಿಂದ ಸೇವೆ
ಸಲ್ಲಿಸುತ್ತಿರುವ ತಾನು, ಸಂಘ ಪರಿವಾರದಲ್ಲಿ ಕಳೆದ 30 ವರ್ಷಗಳಿಂದ ಸಕ್ರಿಯ ಕಾರ್ಯಕರ್ತನಾಗಿದ್ದು, ಇದೀಗ ಪಕ್ಷದ ಕರ್ಯಕರ್ತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಬೈಂದೂರು ಕ್ಷೇತ್ರದಿಂದ ಬಿ.ಎಂ.ಸುಕುಮಾರ ಶೆಟ್ಟಿಯವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದುದನ್ನು ವಿರೋಧಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ನವೀನಚಂದ್ರ ಖಾರ್ವಿ ಉಪ್ಪುಂದ ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಹೊಟೇಲೊಂದರಲ್ಲಿ ಎ.15 ರಂದು ಕರೆಯಲಾದ ಮಾಧ್ಯಮಗೋಷ್ಟಿಯಲ್ಲಿ ಈ ಬಗ್ಗೆ ಅವರು ವಿವರ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಜೆಪಿ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಶೆಟ್ಟಿಯವರು, ನವೀನಚಂದ್ರರನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕೆಜೆಪಿ ಅಭ್ಯರ್ಥಿಯನ್ನಾಗಿ ಆರಿಸಲಾಗಿದೆ ಎಂದು ಪ್ರಕಟಿಸಿದರು.
ಕಳೆದ 30 ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದು, ಲಾಭ ಪಡೆದುಕೊಂಡ ಸುಕುಮಾರ ಶೆಟ್ಟಿಯವರನ್ನು ಇದೀಗ ಬಿಜೆಪಿಗೆ ಕರೆದುಕೊಂಡು ಬಂದು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಮೂಲ ಬಿಜೆಪಿಯವರನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರದ ಅನೇಕರಿಗೆ ನೋವಿದೆ. ನೋವಿನ ಪ್ರತಿರೂಪವಾಗಿ ನೂರು ಮಂದಿ ಗ್ರಾ.ಪಂ.ಸದಸ್ಯರು, ಐವರು ತಾ.ಪಂ.ಸದಸ್ಯರು ಹಾಗೂ ಹಲವಾರು ಮಂದಿ ಸದಸ್ಯರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಬೆಳಗ್ಗೆ ಪಕ್ಷದ ನಾಯಕರಿಗೆ ಫ್ಯಾಕ್ಸ್ ಮಾಡಲಾಗಿದೆ ಎಂದು ನವೀನಚಂದ್ರ ಖಾರ್ವಿ ಹೇಳಿದರು.
ಬಿಜೆಪಿ ಬೆವರು ಸುರಿಸಿ ಕೆಲಸ ಮಡುವ ಕಾರ್ಯಕರ್ತರ ಪಕ್ಷ. ಆದರೆ, ಇಲ್ಲಿ ಇದೀಗ ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತಾಗಿದೆ. ಕೇವಲ ನಾಲ್ಕೈದು ಮಂದಿ ನಾಯಕರ ತೀರ್ಮಾನವೇ ಅಂತಿಮವಾಗುತ್ತಿದೆ. ಪಕ್ಷದಲ್ಲೇ ಇದ್ದು ಅಭ್ಯರ್ಥಿ ಆಕಾಂಕ್ಷಿಗಳಾಗಿದ್ದ ಶಾಸಕ ಲಕ್ಷ್ಮೀನಾರಾಯಣ, ಸುಖಾನಂದ ಶೆಟ್ಟಿ, ಬಾಬು ಶೆಟ್ಟಿ ಇವರಲ್ಲಿ
ಯಾರಾದರೊಬ್ಬರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬಹುದಿತ್ತು. ಇದು ಬಿಟ್ಟು ಇಷ್ಟು ಸಮಯ ಕಾಂಗ್ರೆಸ್ಗಾಗಿ ಕೆಲಸ ಮಾಡಿದವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದುದಕ್ಕೆ ಪಕ್ಷದಲ್ಲೇ ವಿರೋಧವಿದೆ ಎಮದು ನವೀನಚಂದ್ರ ತಿಳಿಸಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಬೆಂಬಲ ವ್ಯಕ್ತಪಡಿಸಲು ಪಕ್ಷ ನಿರ್ಧರಿಸಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಪ್ರವೀಣ ಎಸ್.ಮಾಬಿಯಾನ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಉಡುಪಿ ಮತ್ತು ಕಾಪು ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮಂಗಳವಾರ ತೀರ್ಮಾನವಾಗಲಿದೆ ಎಂದು ಅಶೋಕ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಕೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಕರ ಮುದ್ರಾಡಿ, ಉಪಾದ್ಯಕ್ಷರುಗಳಾದ ಸುಭಾಶಿತ್ ಕುಮಾರ್, ವಿಜಯಕುಮಾರ್ ಹಾಗೂಈ ಕಾರ್ಕಳ ಕ್ಷೇತ್ರದ ಅಭ್ಯರ್ಥಿ ಪ್ರವೀಣ ಮಾಬಿಯಾನ್ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಸ್ಥಳೀಯ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣರಾದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರ ಪ್ರಭಾವದಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಹ್ಲಾದ ಜೋಷಿ ನೇಮಕಗೊಂಡಿದ್ದಾರೆ. ಪ್ರಹ್ಲಾದ್ ಜೋಷಿ ಅಧ್ಯಕ್ಷರೆಮದರೆ ಪರೋಕ್ಷವಾಗಿ ಅನಂತಕುಮಾರ್ ಅವರೇ ಅಧ್ಯಕ್ಷರಾಗಿದ್ದಂತೆ. ಜೋಷಿ, ಅನಂತಕುಮಾರ್ ಅವರ ಡೆಮ್ಮಿ ಅಲ್ಲದೇ ಮತ್ತೇನೂ ಅಲ್ಲ. ಈ ಬೆಳವಣಿಗೆಯಿಂದಾಗಿ ಪಕ್ಷದೊಳಗೆ ಆಂತರಿಕ ಕಚ್ಚಾಟ ಹೆಚ್ಚಾಗಲಿದೆ ಎಂದು ಕೆಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್ ಹೇಳಿದರು.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.22 ರಂದು ಮಧ್ಯಾಹ್ನ ನಡೆಸಿದ ಮಾದ್ಯಮಗೊಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಜೋಷಿ ನೇಮಕಾತಿಯಿಂದಾಗಿ ಈಶ್ವರಪ್ಪ ಹಾಗೂ ಡಿ.ವಿ.ಸದಾನಂದ ಗೌಡರಿಗೆ ದಿಕ್ಕೇ ತೋಚದಂತಾಗಿದೆ. ರಾಜ್ಯಾಧ್ಯಕ್ಷರಾಗಲು ಡಿ.ವಿ. ಮಾಡಿದ ಪ್ರಯತ್ನ ಸಾಮಾನ್ಯದ್ದೇನೂ ಆಗಿರಲಿಲ್ಲ. ಡಿ.ವಿ.ಗಾದ ನಿರಾಸೆ ಬಗ್ಗೆ ಕನಿಕರವಿದೆ ಎಂದು ಧನಂಜಯ ಹೇಳಿದರು.
ಬಿಜೆಪಿ ಈಗಾಗಲೇ ನೆಲಕಚ್ಚಿದೆ. ಮುಂದೆ ಈ ಪಕ್ಷಕ್ಕೆ ಭವಿಷ್ಯವಿಲ್ಲ. ಪಕ್ಷ ಮುಂದೆ ಅಧಿಕಾರಕ್ಕೆ ಬರಬಹುದೆಂಬ ಆಸೆಯನ್ನು ಪಕ್ಷದ ನಾಯಕರೇ ಕೈಬಿಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಭ್ರಮನಿರಸನವಾಗಿದೆ. ಪಕ್ಷದೊಳಗಿನ ಸ್ಥಾಪಿತ ಹಿತಾಸಕ್ತರ ದಾಷ್ಟ್ರ್ಯತನ ಹೀಗೆಯೇ ಮುಂದುವರಿದರೆ ಅನಾಹುತ ಸಂಭವಿಸಲಿದೆ. ಆರ್ಎಸ್ಎಸ್ ನ ಒಪ್ಪಿಗೆ ಇಲ್ಲದೆ ಬಿಜೆಪಿಯಲ್ಲಿ ಹುಲ್ಲುಕಡ್ಡಿ ಕೂಡಾ ಅಲ್ಲಾಡುವುದಿಲ್ಲ. ಹೀಗಿರುವಾಗ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಒಪ್ಪಂದ ಮಾಡಿಕೊಂಡಲ್ಲಿ ಎರಡೂ ಪಕ್ಷಗಳು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಧನಂಜಯ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಾನು ಹಾಗೂ ಯಡಿಯೂರಪ್ಪ ಈ ಜೀವಮಾನದಲ್ಲಿ ಮತ್ತೆ ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ರಾಜಕೀಯದಿಂದಲೇ ನಿವೃತ್ತಿಯಾಗುತ್ತೇವೆಯೇ ಹೊರತು, ಮರಳಿ ಬಿಜೆಪಿ ಸೇರಲಾರೆವು ಎಂದು ಧನಂಜಯ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಲ್ಲಿಯೂ ನಾಯಕತ್ವಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಹೆಚ್ಚು ಮಂದಿ ನಾಯಕರಿರುವುದೇ ಈ ಪಕ್ಷದ ಸಮಸ್ಯೆಯಾಗಿದೆ. ವಿಧಾನಸಭೆಯ ಒಳಗೂ, ಹೊರಗೂ ಪ್ರಮುಖ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಜನ ವಿರೋಧಿ ನೀತಿಗಳ ವಿರುದ್ಧ ಆಂದೋಲನ ರೂಪಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಜೆಡಿಎಸ್ ನಲ್ಲೂ ಒಳಜಗಳವಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೆಜೆಪಿ ತನ್ನ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ಕಣಕ್ಕಿಳಿಸಲಿದೆ ಎಂದು ಧನಂಜಯ ಕುಮಾರ್ ತಿಳಿಸಿದರು. ಕೆಜೆಪಿ ನೂತನ ಉಡುಪಿ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ನಾಯಕರುಗಳಾದ ಮಧುಕರ ಮುದ್ರಾಡಿ, ಸುಭಾಶಿತ್ ಕುಮಾರ್, ದಿನಕರ್ ಬೆಂಗಳೂರು ಹಾಗೂ ಶಂಕರ ಗೌಡ ಪಾಟೀಲ್ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ಬಡಾ ಗ್ರಾಮದ ಸರ್ವೆ ನಂಬ್ರ 161 ರ 45 ಸೆಂಟ್ಸ್ ಭೂಮಿಯಲ್ಲಿ ಹಿಂದಿನಿಂದಲೇ ಇರುವ ರುದ್ರಭೂಮಿಯಲ್ಲಿ ದಲಿತರ ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಬಿಡುತ್ತಿಲ್ಲ. ಈ ವಿವಾದ ಇರುವಾಗಲೇ ಇದೇ ಗ್ರಾಮದ ಇನ್ನೊಂದು ಸ್ಥಳದಲ್ಲಿ 30 ಸೆಂಟ್ಸ್ ಸರಕಾರಿ ಭೂಮಿಯಲ್ಲಿ ಹೊಸದಾಗಿ ಮತ್ತೊಂದು ರುದ್ರಭೂಮಿಯನ್ನು ಸ್ಥಾಪಿಸಲಾಗಿದೆ. ಇಲ್ಲೂ ಸಹ ದಲಿತರ ಹೆಣಗಳ ಅಂತ್ಯ ಸಂಸ್ಕಾರ ನಡೆಸಲು ತಡೆ ಒಡ್ಡಲಾಗುತ್ತಿದೆ. ಇತ್ತೀಚೆಗೆ ಕೃಷ್ಣಪ್ಪ ಎಂಬವರು ಮೃತರಾದಾಗ ಅವರ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡದ ಕಾರಣ ಬಳಿಕ ಬೆಳಪುವಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ಮಾಡಬೇಕಾಗಿ ಬಂತು. ಇದರ ಹಿಂದೆ ಶಾಸಕ ಲಾಲಾಜಿ ಆರ್.ಮೆಂಡನ್ ಕೈವಾಡವಿದೆ. ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂಬ ಒಕ್ಕೊರಲಿನ ಒತ್ತಾಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ವ್ಯಕ್ತವಾಯಿತು.
ಒಂದೇ ಗ್ರಾಮದಲ್ಲಿ ಎರಡು ರುದ್ರಭೂಮಿ ಇದ್ದರೆ ಅದು ಉಚ್ಚಿಲದಲ್ಲಿ ಮಾತ್ರ ಇರಬಹುದು. ಆದರೆ, ಇಲ್ಲಿ ಒಂದು ರುದ್ರಭೂಮಿಯಲ್ಲಿ ಒಂದು ಜಾತಿಯವರೂ, ಇನ್ನೊಂದರಲ್ಲಿ ಇನ್ನೊಂದು ಜಾತಿಯವರೂ ದಲಿತರ ಶವಗಳ ಅಂತ್ಯ ಸಂಸ್ಕಾರಕ್ಕೆ ತಡೆ ಒಡ್ಡುತ್ತಿದೆ. ರುದ್ರಭೂಮಿ ಸಾರ್ವಜನಿಕರಿಗೆ ಸೇರಿದ್ದು ಎಂದು ಜಿಲ್ಲಾಡಳಿತ ನಿನ್ನೆಯಷ್ಟೇ ಅಳವಡಿಸಿದ ನಾಮಫಲಕವನ್ನು ಇಂದು ಕಿಡಿಗೇಡಿಗಳು ಕಿತ್ತುಹಾಕಿದ್ದಾರೆ. ಹೀಗಾದರೆ ದಲಿತರ ಹೆಣಗಳನ್ನು ಸಮುದ್ರಕ್ಕೆಸೆಯಬೇಕೇ ಎಂದು ಪ್ರಶ್ನಿಸಿದ ದಲಿತ ನಾಯಕರು, ಇದಕ್ಕೆ ಕಾರಣರಾದವರ ಮೇಲೆ ಯಾಕೆ ಇನ್ನೂ ಸಹ ಅಟ್ರಾಸಿಟಿ ಕೇಸು ದಾಖಲಿಸಿ ಬಂಧಿಸುತ್ತಿಲ್ಲ ಎಂದು ದಲಿತ ಮುಖಂಡರು ಖಾರವಾಗಿಯೇ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ರುದ್ರಭೂಮಿಯಲ್ಲಿ ನಡೆದ ಅಹಿತಕಾರಿ ಘಟನೆಗಳ ಬಗ್ಗೆ ‘ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಲಿಖಿತ ದೂರು ಬಂದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ, ಇದರ ಹಿಂದೆ ಶಾಸಕರ ಕೈವಾಡವಿಲ್ಲ’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಬೋರಲಿಂಗಯ್ಯ ಎಂ.ಬಿ. ಉತ್ತರಿಸಿದಾಗ ಕೆಂಡಮಂಡಲರಾದ ದಲಿತ ನಾಯಕರು, ‘ಇಲ್ಲಿ ನೀವು ಪಿಡಿಓ ಅವರಿಂದ ಲಿಖಿತ ದೂರು ಬಂದರೆ ಮಾತ್ರ ಕ್ರಮ ಅನ್ನುತ್ತೀರಿ, ಅಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರು ಪಿಡಿಓ ಅವರಲ್ಲಿ ದೂರು ನೀಡುವ ಕೆಲಸ ನಿಮಗೆ ಬೇಡ ಎಂದು ತಾಕೀತು ಮಾಡುತ್ತಿದ್ದಾರೆ. ಶಾಸಕರ ಕೈವಾಡವಿಲ್ಲದಿದ್ದರೆ, ಜಿಲ್ಲಾಧಿಕಾರಿಗಳ ಕೈವಾಡವಿದೆ ಎನ್ನಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಿಮವಾಗಿ ಎಸ್ಪಿ ಬೋರಲಿಂಗಯ್ಯ ಅವರು, ಉಚ್ಚಿಲ ಬಡಾ ಗ್ರಾಮದಲ್ಲಿ ಇರುವ ಎರಡೂ ರುದ್ರಭೂಮಿಗಳು ಎಲ್ಲರಿಗೂ ಸೇರಿದ್ದು, ಮುಂದಕ್ಕೆ ಎಲ್ಲವನ್ನೂ ಪರಿಹರಿಸಲಾಗುವುದು ಎಂದು ಸಮಜಾಯಿಷಿಕೆ ನೀಡಿದರು.
ಹಂದಾಡಿ ಗ್ರಾಮದ ದಲಿತ ರಿಕ್ಷಾ ಚಾಲಕ ಭರತ್ ತನ್ನ ಮನೆ ಪಕ್ಕದ ಮುಸ್ಲೀಮ್ ಯುವತಿ ಫರಾ (ಈಗಿನ ಹೆಸರು ಭೂಮಿಕಾ) ಪ್ರೀತಿಸಿ 2012 ರ ಮಾರ್ಚ್ 19 ರಂದು ಮಂಗಳೂರಿನ ಆರ್ಯ ಸಮಾಜದಲ್ಲಿ ಮತ್ತು ಸಬ್ ರಿಜಿಸ್ಟರ್ಡ್ ಕಚೇರಿಯಲ್ಲಿ ವಿವಾಹವಾಗಿದ್ದಾನೆ. ಈ ಸಂದರ್ಭದಲ್ಲಿ ಯುವತಿಯ ಮನೆಯವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಗ ಠಾಣೆಗೆ ಹಾಜರಾಗಿದ್ದ ಯುವತಿ, ತಾನು ಸ್ವಂತ ಇಚ್ಛೆಯಿಂದ ಭರತ್ ನನ್ನು ಪ್ರೀತಿಸಿ ವಿವಾಹವಾಗಿದ್ದೇನೆ. ಗಂಡನ ಜೊತೆಗೆ ಹೋಗುವುದಾಗಿ ತಿಳಿಸಿ ಗಂಡನ ಜೊತೆಗೆ ಹೋಗಿದ್ದಳು. ಯುವತಿಯ ಮನೆಯವರೂ ಆಕೆಯನ್ನು ಬಿಟ್ಟು ಬಿಟ್ಟಿದ್ದರು. ಎರಡು ತಿಂಗಳ ಹಿಂದೆ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಭೂಮಿಕಾ ಮಗುವಿಗೆ ಜನ್ಮ ನೀಡಿದ್ದಾಳೆ. ಆಗ ಆಸ್ಪತ್ರೆಗೆ ಬರಲು ಆರಂಭಿಸಿದ ಭೂಮಿಕಾ ಮನೆಯವರು ಬಳಿಕ ಗಂಡ ಆಕೆಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ದೂರು ಕೊಟ್ಟಿದ್ದಾರೆ. ನಂತರ ಸಬ್ ಇನ್ ಸ್ಪೆಕ್ಟರ್ ಗಿರೀಶ್ ಇದೇ ಫೆ.7 ರಂದು ಇಬ್ಬರನ್ನೂ ಠಾಣೆಗೆ ಕರೆಸಿ ಜೊತೆಗೆ ಕುಳ್ಳಿರಿಸಿ ವಿಚಾರಣೆ ನಡೆಸಿದ್ದಾರೆ. ಆಗ ಯುವತಿ ಗಂಡನಿಂದ ಏನೂ ತೊಂದರೆ ಇಲ್ಲವೆಂದು ತಿಳಿಸಿದ್ದಾಳೆ. ಬಳಿಕ ಮಹಿಳಾ ಪೊಲೀಸ್ ಭೂಮಿಕಾ ಒಬ್ಬಾಕೆಯನ್ನೇ ಕರೆದು ಪ್ರತ್ಯೇಕವಾಗಿ ಕರೆಸಿ ಏಕಾಂತದಲ್ಲಿ ವಿಚಾರಣೆ ನಡೆಸಿದಾಗಲೂ ಆಕೆ ಗಂಡನ ಜೊತೆಗೆ ಇರುವುದಾಗಿ ಹೇಳಿಕೆ ನೀಡಿದ್ದಾಳೆ. ಅದೇ ದಿನ ಯುವತಿ ಮನೆಯವರು ಇನ್ನೂ ಕೆಲವರ ಜೊತೆಗೆ ವಕೀಲರನ್ನು ಕರೆದುಕೊಂಡು ಠಾಣೆಗೆ ಬಂದು ಯುವತಿಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಯುವತಿ ತಾನು ಗಂಡನ ಜೊತೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ ಎಂದು ಹೇಳಿಕೊಂಡ ಸಬ್ ಇನ್ಸ್ಪೆಕ್ಟರ್ ಗಿರೀಶ್, ಗಂಡ-ಹೆಂಡಿರ ನಡುವೆ ಕೌನ್ಸಲಿಂಗ್ ನಡೆಸದೆ ತರಾತುರಿಯಲ್ಲಿ ಯುವತಿಯ ಕಾಲಿನಿಂದ ಕಾಲುಂಗುರ ಮತ್ತು ಕುತ್ತಿಗೆಯಿಂದ ತಾಳಿ ತೆಗೆಸಿದ್ದಾರೆ. ತಾಯಿ ಜೊತೆಗೆ ಯುವತಿಯನ್ನು ಕಳಿಸಿಕೊಟ್ಟಿದ್ದಾರೆ. ಇದೀಗ ಯುವತಿಯನ್ನು ಆಕೆಯ ಮನೆಯವರು ನಿಗೂಢ ಸ್ಥಳದಲ್ಲಿ ಇರಿಸಿದ್ದು ಎರಡನೇ ಮದುವೆಗೆ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಪಿಎಸ್ಐ ಗಿರೀಶ್ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಕಾಲುಂಗುರ-ತಾಳಿ ಕಳಚಿಕೊಟ್ಟು ದಂಪತಿಗಳನ್ನು ಬೇರೆ ಬೇರೆ ಮಾಡುವಂತ ಜಡ್ಜ್ ಮೆಂಟ್ ನೀಡಲು ಪಿಎಸ್ಐ ಯಾರು ಎಂದು ಖಾರವಾಗಿ ಪ್ರಶ್ನಿಸಿದ ದಲಿತ ನಾಯಕರು, ಇದರಿಂದಾಗಿ ಯುವಕ ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ. ಅಂತರ್ಧಮೀಯ ದಂಪತಿಗಳಲ್ಲಿ ಯುವತಿ ಮೂಸ್ಲೀಮಳಾದರೆ ಅವರನ್ನು ಬೇರ್ಪಡಿಸುವ ಷಡ್ಯಂತ್ರವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಯುವಕನಿಗೇನಾದರೂ ಆದಲ್ಲಿ ನಾವು ಸಹಿಸಲಾರೆವು. ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಸ್ಪಷ್ಟಪಡಿಸಿದರು.
ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾಣೆ, ಕಾರ್ಕಳ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ, ದಲಿತ ನಾಯಕರಾದ ಜಯನ್ ಮಲ್ಪೆ, ಸುಂದರ ಮಾಸ್ತರ್, ಮೋಹನಚಂದ್ರ ಕಾಳಾವರ, ಗಣೇಶ್ ಕುಂದಾಪುರ, ಶ್ಯಾಮರಾಜ್ ಬಿರ್ತಿ, ಸುಂದರ ಕಪ್ಪೆಟ್ಟು, ಉದಯ ಕುಮಾರ್ ತಲ್ಲೂರು, ಚಂದ್ರ ಹೆಮ್ಮಾಡಿ, ಗೋಪಾಲಕೃಷ್ಣ ಕುಂದಾಪುರ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ಭೂಮಿಯನ್ನು ರಾಷ್ಟ್ರೀಕರಣ ಮಾಡದೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯವಿಲ್ಲ. ಹಾಗಾಗಿ ಮೊತ್ತ ಮೊದಲು ಸರಕಾರ ಭೂಮಿಯನ್ನು ರಾಷ್ಟ್ರೀಕರಣಗೊಳಿಸಬೇಕು. ಬಡವರು ಭೂಮಿ ಇಲ್ಲದೆ ಬೀದಿ ಪಾಲಾಗುತ್ತಿರುವ ಸಂದರ್ಭದಲ್ಲಿ ಕುಮ್ಕಿ ಎಂಬ ಹೆಸರಲ್ಲಿ ಸರಕಾರಿ ಭೂಮಿಯನ್ನು ಭೂಮಾಲೀಕರಿಗೆ ವಿತರಿಸಲು ನಿರ್ಧರಿಸಿರುವುದು ಸರಕಾರ ಭೂಮಾಲೀಕರ ಪರವಾಗಿದೆ ಎಂಬುದಕ್ಕೆ ಸಾಕ್ಷಿ. ಸರಕಾರ ಬಡವರ ವಿರೋಧಿ ಸರಕಾರ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.
ಕುಮ್ಕಿ ಹಕ್ಕು ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಮತ್ತು ಕುಮ್ಕಿ ಭೂಮಿಯನ್ನು ಭೂರಹಿತ ಬಡವರಿಗೆ ವಿತರಿಸಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆ ಇಂದು ಸಂಜೆ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ ಅನೇಕ ದಶಕಗಳಿಂದ ಭೂರಹಿತ ಬಡವರು ವಸತಿಗಾಗಿ ಕನಿಷ್ಟ ಐದು ಸೆಂಟ್ಸ್ ಭೂಮಿ ಕೊಡಿ ಎಂದು ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸುತ್ತಾ ಬಂದಿದ್ದಾರೆ. ಆದರೆ, ಸರಕಾರ ”ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಎಂದು ಘೋಷಿಸುತ್ತಲೇ ಇನ್ನೊಂದೆಡೆ ಭೂರಹಿತ ಬಡವರಿಗೆ ಭೂಮಿ ನೀಡುವ ಬದಲಾಗಿ ಭೂರಹಿತರ ಹಕ್ಕಿನ ಭೂಮಿಯಾದ ಎಕರೆಗಟ್ಟಲೆ ಸರಕಾರಿ ಭೂಮಿಯನ್ನು ಮತ್ತೆ ಭೂಮಿ ಇರುವವರಿಗೆ ನೀಡುವ ತೀರ್ಮಾನ ಕೈಗೊಂಡಿದೆ. ಇದು ಶ್ರೀಮಂತರನ್ನು ಇನ್ನಷ್ಟೂ ಶ್ರೀಮಂತರನ್ನಾಗಿಸುವ ಮತ್ತು ಅಸಮಾನತೆಯ ಕಂದರವನ್ನು ಮತ್ತಷ್ಟೂ ಹೆಚ್ಚಿಸುವ ಕ್ರಮವಲ್ಲದೆ ಮತ್ತೇನೂ ಅಲ್ಲ. ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದಲ್ಲಿ ಕರ್ನಾಟಕ ಜನಪರ ವೇದಿಕೆ ಸರಕಾರದ ವಿರುದ್ಧ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಿದೆ ಎಂದು ವೇದಿಕೆಯ ಸ್ಥಾಪಕ ಶ್ರೀರಾಮ ದಿವಾಣ ಹೇಳಿದರು. ಪ್ರತಿಭಟನಾ ಪ್ರದರ್ಶನದ ಬಳಿಕ ಅಪರ ಜಿಲ್ಲಾಧಿಕಾರಿಗಳಾದ ಕುಮಾರ್ ಅವರ ಮೂಲಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಉಡುಪಿ ಕಚೇರಿ ಮೂಲಕ ಸಚಿವರ ಬೆಂಗಳೂರು ಕಚೇರಿಗೆ ಫ್ಯಾಕ್ಸ್ ಮೂಲಕ ಮನವಿಯನ್ನು ಕಳುಹಿಸಿಕೊಡಲಾಯಿತು.
ಕನರ್ಾಟಕ ಜನಪರ ವೇದಿಕೆಯ ಪ್ರಮುಖರಾದ ಹೇಮಂತ ಕುಂದರ್, ರಸೂಲ್ ಕಟಪಾಡಿ, ಶೇಖರ ಶೆಟ್ಟಿ, ಮೊಹಮ್ಮದ್ ಹಂದಟ್ಟು, ಪ್ರಕಾಶ್ ಪೂಜಾರಿ, ಸತೀಶ್ ಪೂಜಾರಿ, ನಾಗೇಂದ್ರ ಕೋಟ, ರಾಜಶೇಖರ್ ಸಾಲಿಗ್ರಾಮ, ಸಂಜೀವ ಪೂಜಾರಿ, ಅಶ್ವಿಜ್ ರಾವ್, ಸತೀಶ್ ನಾಯ್ಕ, ಕಣ್ಣನ್ ಮೊದಲಾದವರು ಪ್ರತಿಭಟನಾ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

ಉಡುಪಿ: ಮಂಗಳೂರಿನ ಕೆಂಜಾರಿನಲ್ಲಿ ಆರ್ಎಸ್ಎಸ್ ಹಮ್ಮಿಕೊಂಡ ಸಾಂಘಿಕ್ ನಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಗಳು ನಿಗದಿತ ಪರೀಕ್ಷೆಗಳನ್ನು ಮುಂದೂಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ನ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಮಿತಿ ರಾಜ್ಯಪಾಲರನ್ನು ಒತ್ತಾಯಿಸಿದೆ.
ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಮೃತ್ ಶೆಣೈಯವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ನಾಯಕರ ನಿಯೋಗವೊಂದು ಇಂದು ಸಂಜೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನು ಭೇಟಿಯಾಗಿ, ಅವರ ಮೂಲಕ ರಾಜ್ಯಪಾಲರಿಗೆ ಈ ಸಂಬಂಧ ಮನವಿ ಸಲ್ಲಿಸಿತು. ಫೆ.4 ಮತ್ತು 5 ರಂದು ನಡೆಯಬೇಕಾಗಿದ್ದ ಎಸ್ಎಸ್ಎಲ್ಸಿ ಹಾಗೂ ದ್ವಿತಿಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮುಂದೂಡಿದ್ದಾರೆ. ಪ್ರಥಮ ಪಿಯುಸಿ ರಸಾಯನ ಶಾಸ್ತ್ರ ಪ್ರಾಯೋಗಿಕ ಪರೀಕ್ಷೆಯನ್ನು ಫೆ.12 ರ ಬದಲಾಗಿ ಫೆ. 4 ಕ್ಕೆ ಹಿಂದಕ್ಕೆ ಹಾಕಿದ್ದಾರೆ. ಇದಕ್ಕೆ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರಣರು. ಇವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೆಂಜಾರಿನಲ್ಲಿ ಫೆ.3 ರಂದು ನಡೆದ ಸಾಂಘಿಕ್ನ್ನು ಆರ್ಎಸ್ಎಸ್ ಮತ್ತು ಪರಿವಾರದ ರಾಜಕೀಯ ಸಂಘಟನೆಗಳನ್ನು ಬಲಪಡಿಸುವ ದುರುದ್ಧೇಶದಿಂದ ಆಯೋಜಿಸಲಾಗಿದೆ. ಇದೊಂದು ಶಿಕ್ಷಣೇತರ ಮತ್ತು ಸರಕಾರೇತರ ಸಂಘಟನೆಯಾಗಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ. ಸರಕಾರದ ಶಿಕ್ಷಣ ನೀತಿಯಲ್ಲೂ ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದು, ಮಧ್ಯಪ್ರವೇಶ ಮಾಡುವ ಮೂಲಕ ಸರಕಾರಕ್ಕೆ ಸೂಕ್ತ ನಿರ್ದೇಶನ ಮಾಡುವ ಮೂಲಕ ಗೊಂದಲಗಳನ್ನು
ಪರಿಹರಿಸಬೇಕೆಂದೂ ಮನವಿಯಲ್ಲಿ ವಿನಂತಿಸಲಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜನಾರ್ದನ ಭಂಡಾರ್ಕರ್, ಯುವ ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರ, ಎಂ.ಯಜ್ಞೇಶ್ ಆಚಾರ್ಯ, ಜೆ.ವಿಜಯ ಡಿ’ಸೋಜಾ, ಮಿಥುನ್ ಉಡುಪ, ರಮೇಶ್ ಕಾಂಚನ್, ಆಕಾಶ್, ಪ್ರಖ್ಯಾತ್ ಶೆಟ್ಟಿ, ಹಬೀಬ್ ಅಲಿ, ಅನೂಪ್ ದೇವಾಡಿಗ ಮೊದಲಾದವರು ನಿಯೋಗದಲ್ಲಿದ್ದರು.

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ವಿದ್ಯಾರ್ಥಿನಿಯರ ಸರಕಾರಿ ವಸತಿ ನಿಲಯದ ವಾರ್ಡನ್ ವಿದ್ಯಾರ್ಥಿನಿಯರನ್ನು ಹೀಯಾಳಿಸುವುದು, ಜಾತಿ ಕೇಳಿ ಅವಮಾನ ಮಾಡುವುದು ಇತ್ಯಾದಿ ಮಾಡುತ್ತಿದ್ದಾನೆ. ಇದಕ್ಕಾಗಿ ಈತ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿನಿಯರ ಕ್ಷಮೆ ಯಾಚಿಸಬೇಕು ಎಂದು ಎಬಿವಿಪಿ ನಾಯಕಿ ಕು. ಅಕ್ಷತಾ ಒತ್ತಾಯಿಸಿದ್ದಾರೆ.
ಎಸ್ಸಿ, ಎಸ್ಟಿ ಮತ್ತು ಓಬಿಸಿ ಹಾಸ್ಟೆಲ್ ಗಳ ಸುಧಾರಣೆಗೆ ಆಗ್ರಹಿಸಿ ಎಬಿವಿಪಿ ವತಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ ಗಡಿಯಾರ ಗೋಪುರದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.
ಉಡುಪಿಯ ಸರಕಾರಿ ಹಾಸ್ಟೆಲ್ ಗಳು ಸಮಸ್ಯೆಗಳ ಗೂಡಾಗಿದೆ. ಇಲ್ಲಿ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳ ಸಮ್ಯೆಗಳನ್ನು ಕೇಳಲು ಯಾರೂ ಬರುತ್ತಿಲ್ಲ. ಹಾಸ್ಟೆಲ್ ನಲ್ಲಿರುವ ಸಮಸ್ಯೆಗಳ ಬಗ್ಗೆ ಬಗ್ಗೆ ಅಧಿಕಾರಿಗಳ ಸಭೆಗಳೂ ನಡೆಯುತ್ತಿಲ್ಲ. ಹಾಸ್ಟೆಲ್ ಗಳಲ್ಲಿ ಕೊಚ್ಚಿಲಕ್ಕಿ ಅನ್ನ ಮಾಡುತ್ತಾರೆ. ಕೊಚ್ಚಿಲಕ್ಕಿ ಅನ್ನ ತಿಂದು ಅಭ್ಯಾಸವಿಲ್ಲದ ಕಾರಣ ನಾವೆಲ್ಲ ದೈಹಿಕವಾಗಿ ಗಟ್ಟಿಯಾಗಿಲ್ಲ ಎಂದು ಹೇಳಿದ ಅಕ್ಷತಾ, ಹಾಸ್ಟೆಲ್ ಗಳಲ್ಲಿ ಗ್ರಂಥಾಲಯ, ಕಂಪ್ಯೂಟರ್ ಇತ್ಯಾದಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ನೂರ ಹತ್ತಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿರುವ ಹಾಸ್ಟೆಲ್ಗಳಲ್ಲಿ ಕೇವಲ ಮೂರು ಶೌಚಾಲಯಗಳಿವೆ. ಇದು ಎಲ್ಲಿಗೆ ಸಾಕು ಎಂದು ಇದೇ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಪ್ರಶ್ನಿಸಿದರು.
ರಾಜ್ಯದಲ್ಲಿ ಪ್ರವೇಶ ಬಯಸುವ ವಿದ್ಯಾಥರ್ಿಗಳಲ್ಲಿ 80 ಶೇಕಡಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಈಗ ಇರುವ ಹಾಸ್ಟೆಲ್ ಗಳಿಗೆ ಆಗುತ್ತಿಲ್ಲ. ಅರ್ಜಿ ಸಲ್ಲಿಸುವ 50 ಶೇಕಡಾ ವಿದ್ಯಾರ್ಥಿಗಳಿಗಾದರೂ ಪ್ರವೇಶಾವಕಾಶ ಕಲ್ಪಿಸಿಕೊಡಲು ಅಗತ್ಯವಾದ ಹಾಸ್ಟೆಲ್ ಗಳನ್ನು ಪ್ರಾರಂಭಿಸಬೇಕು, ಶೇ.45 ರಷ್ಟು ಹಾಸ್ಟೆಲ್ಗಳು ಬಾಡಿಗೆ ಕಟ್ಟಡಗಳಲ್ಲಿವೆ. ಖಾಸಗಿಯವರಿಗೆ ಪ್ರತೀ ವರ್ಷ ಕೋಟ್ಯಂತರ ರು. ಬಾಡಿಗೆ ನೀಡುವ ಮೂಲಕ ಖಾಸಗಿಯವರನ್ನು ಉದ್ಧಾರ ಮಾಡಲಾಗುತ್ತಿದೆ. ಹಾಗಾಗಿ ಹಸ್ಟೆಲ್ಗಳಿಗಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು, ಶೇ. 55 ವಿದ್ಯಾರ್ಥಿಗಳಿಗೆ ಕೊಠಡಿ
ಸೌಲಭ್ಯಗಳಿಲ್ಲವಾದುದರಿಂದ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಬೇಕು, ಶೇ. 95 ರಷ್ಟು ವಿದ್ಯಾರ್ಥಿಗಳಿಗೆ ಸ್ನಾನಗೃಹಗಳ ಕೊರತೆ ಇದ್ದು, ಹೆಚ್ಚುವರಿ ಸ್ನಾನಗೃಹಗಳನ್ನು ನಿರ್ಮಿಸಬೇಕು, ಉನ್ನತ ಪದವೀಧರರನ್ನು ಖಾಯಂ ನಿಲಯ ಪಾಲಕರನ್ನಾಗಿ ನೇಮಿಸಬೇಕು, ಹಾಸ್ಟೆಲ್ ಗಳ ಸಮರ್ಥ ನಿರ್ವಹಣೆಗಾಗಿ ಸ್ವಾಯತ್ತ ಪ್ರಾಧಿಕಾರವನ್ನು ರಚಿಸಬೇಕು, ವಿದ್ಯಾರ್ಥಿಯೊಬ್ಬನ ಆಹಾರ ಭತ್ಯೆಯನ್ನು 850 ರು. ನಿಂದ 2500 ರು.ಗೆ ಹೆಚ್ಚಿಸಬೇಕು, ಅಧ್ಯಯನ ಕೊಠಡಿ, ಟೇಬಲ್, ಕುರ್ಚಿ, ಯುಪಿಎಸ್, ಕಂಪ್ಯೂಟರ್, ಇಂಟರ್ ನೆಟ್, ಗ್ರಂಥಾಲಯ ಸೌಲಭ್ಯವನ್ನು ಒದಗಿಸಬೇಕು, ಸೋಲಾರ್ ವ್ಯವಸ್ಥೆ ಅಳವಡಿಸಬೇಕು, ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಬೇಕು, ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಒದಗಿಸಬೇಕು, ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜ್ಯಾರಿಗೊಳಿಸಬೇಕು, ಮೊಬೈಲ್ ವಾರ್ಡನ್ ಗಳನ್ನು ವಜಾಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ಸರಕಾರದ ಮುಂದಿಟ್ಟರು.
ಪ್ರತಿಭಟನಾ ಪ್ರದರ್ಶನದ ಬಳಿಕ ಗಡಿಯಾರ ಗೋಪುರದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತಾಲೂಕು ವಿಸ್ತರಣಾಧಿಕಾರಿ ಕಚೇರಿಗೆ ಭೇಟಿ ನಿಡಿದ ವಿದ್ಯಾರ್ಥಿಗಳು, ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ವಿದ್ಯಾರ್ಥಿ ನಾಯಕರಾದ ಅಕ್ಷಯ್ ಕಮ್ಮರಡಿ, ಶಶಿರ್, ಲೋಕೇಶ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಉಡುಪಿ: ರಾಜ್ಯದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಆದೇಶ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ರವರ ಮೌಕಿಕ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ದ್ವಿತಿಯ ಪಿಯಿಸಿ ಮತ್ತು ಎಸ್ಎಸ್ಎಲ್ ಸಿ
ಪ್ರಿಪೆರ್ಟರಿ ಪರೀಕ್ಷೆಗಳನ್ನು ಮುಂದೂಡಿದ್ದಾರೆ.
ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದುನಡೆಸುತ್ತಿರುವ ವಿಭಾಗ ಸಾಂಘಿಕ್ ನ ಯಶಸ್ಸಿಗಾಗಿ ಮಕ್ಕಳ ಪರೀಕ್ಷೆಯನ್ನು ಮುಂದೂಡುವಂತೆ ಸಚಿವ ಕಾಗೇರಿಯವರು ಆದೇಶ ನೀಡಿದ ಕಾರಣ, ಇಲಾಖಾಧಿಕಾರಿಗಳು ಪರೀಕ್ಷೆ ಮುಂದೂಡಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳನ್ನು ಮುಂದೂಡಲಾಗಿರುವ ಬಗ್ಗೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಎಸ್.ಶಿಂಧಾ ಅವರಿಂದ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥರಿಂದ ಅಂಚೆ ಕಾರ್ಡು ಮೂಲಕ ಸೂಚಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಮೌಕಿಕವಾಗಿ ಮಾತ್ರ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಬರೆದ ಅಂಚೆ ಕಾರ್ಡ್ ನಲ್ಲಾಗಲೀ, ಮೌಕಿಕವಾಗಿ ತಿಳಿಸಿದ
ಸಂದರ್ಭದಲ್ಲಾಗಲೀ ಪರೀಕ್ಷೆಗಳನ್ನು ಮುಂದೂಡಲು ಏನು ಕಾರಣ ಎಂಬುದನ್ನು ತಿಳಿಸಲಾಗಿಲ್ಲ. ನಿಜವಾದ ಕಾರಣವನ್ನು ಮುಚ್ಚಿಡಲಾಗಿದೆ.
ಫೆ.3 ರಂದು ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಯೋಜಿಸಿದ ‘ವಿಭಾಗ ಸಾಂಘಿಕ್’ ನಲ್ಲಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವ ಏಕೈಕ ಉದ್ಧೇಶದಿಂದ ಆರ್ಎಸ್ಎಸ್ ನಾಯಕರು ಸಚಿವರ ಮೂಲಕ ಅಧಿಕಾರಿಗಳಿಗೆ ಆದೇಶ ಹೊರಡಿಸಿ ಪರೀಕ್ಷೆಗಳನ್ನು ಮುಂದೂಡಿಸಿದ್ದಾರೆ.
ಆಡಳಿತ ಪಕ್ಷ ಮತ್ತು ಆಡಳಿತ ಪಕ್ಷವನ್ನು ನಿಯಂತ್ರಿಸುತ್ತಿರುವ ಸಂಗ ಪರಿವಾರದ ನಾಯಕರ ಒತ್ತಡದಿಂದಾಗಿ ಅಧಿಕಾರಿಗಳು ಮಕ್ಕಳನ್ನು ಬಲಿಪಶು ಮಾಡಿರುವುದು ಇದೀಗ ಸ್ಪಷ್ಟವಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ವಿಭಾಗ ಸಾಂಘಿಕ್ ನಲ್ಲಿ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸುವ ಗುರಿಯನ್ನು ಸಂಘದ ಸರ್ವಾಧಿಕಾರಿಗಳು ಹೊಂದಿದ್ದಾರೆ. ಆದರೆ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸಲು ಸಂಘದ ನಾಯಕರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ. ಇದರಲ್ಲಿ ಸಂಘದ ಸರ ಸಂಘ ಚಾಲಕರ ಸಹಿತ ಅನೇಕ ಮಂದಿ ಪ್ರಮುಖರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿರುವುದರಿಂದ ಮತ್ತು ಮುಂದಿನ
ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದಿನಲ್ಲಿ ಬಿದ್ದಿರುವ ಸಂಘಕ್ಕೆ ವಿಭಾಗ್ ಸಾಂಘಿಕ್ ಪ್ರತಿಷ್ಟೆಯ ಮತ್ತು ಅತೀ ತುರ್ತಿನ ವಿಷಯವಾಗಿದೆ.
ಪ್ರಿಪೆರ್ಟರಿ ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳು ವಿಭಾಗ್ ಸಾಂಘಿಕ್ ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಂಘದ ನಾಯಕರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡರು, ಆ ಮೂಲಕ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಆರ್ಎಸ್ಎಸ್ ಎಂಬೊಂದು ಸಂಘಟನೆ ತಾನು ಹಮ್ಮಿಕೊಂಡಿರುವ ಒಂದು ಸಮಾವೇಶದ ಯಶಸ್ವಿಗಾಗಿ ಸರಕಾರವನ್ನು, ಸರಕಾರಿ ಅಧಿಕಾರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹೀಗೆ ಬಲಿಪಶು ಮಾಡುತ್ತಿರುವುದು, ದುರ್ಬಳಕೆ ಮಾಡುತ್ತಿರುವುದು ಇದೀಗ ವ್ಯಾಪಕ ಚರ್ಚೆ ಮತ್ತು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಜಿಲ್ಲೆಯಲ್ಲಿ ದ್ವಿತಿಯ ಪಿಯಿಸಿ ಮತ್ತು ಎಸ್ಎಸ್ಎಲ್ ಸಿ ಪ್ರಿಪೆರ್ಟರಿ ಪರೀಕ್ಷೆ ನಡೆಯುತ್ತಿದ್ದು, ಫೆಬ್ರವರಿ 4 ಸೋಮವಾರದ ಪರೀಕ್ಷೆಯನ್ನು ಫೆ. 5 ಮಂಗಳವಾರಕ್ಕೆ ಮುಂದೂಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮ ಭಾರೀ ಸಂಶಯಕ್ಕೆ ಕಾರಣವಾಗಿದೆ.
ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳನ್ನು ಮುಂದೂಡಲಾಗಿರುವ ಬಗ್ಗೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಎಸ್.ಶಿಂಧಾ ಅವರಿಂದ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥರಿಂದ ಅಂಚೆ ಕಾರ್ಡು ಮೂಲಕ ಸೂಚಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಮೌಕಿಕವಾಗಿ ಮಾತ್ರ ತಿಳಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಿಗೆ ಬರೆದ ಅಂಚೆ ಕಾರ್ಡ್ ನಲ್ಲಾಗಲೀ, ಮೌಕಿಕವಾಗಿ ತಿಳಿಸಿದ ಸಂದರ್ಭದಲ್ಲಾಗಲೀ ಪರೀಕ್ಷೆಗಳನ್ನು ಮುಂದೂಡಲು ಏನು ಕಾರಣ ಎಂಬುದನ್ನು ತಿಳಿಸಲಾಗಿಲ್ಲ. ನಿಜವಾದ ಕಾರಣವನ್ನು ಮುಚ್ಚಿಡಲಾಗಿದೆ.
ಫೆ.3 ರಂದು ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಯೋಜಿಸಿದ ‘ವಿಭಾಗ ಸಾಂಘಿಕ್’ ನಲ್ಲಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವ ಏಕೈಕ ಉದ್ಧೇಶದಿಂದ ಆರ್ಎಸ್ಎಸ್ ನಾಯಕರು ಸರಕಾರಿ ಅಧಿಕಾರಿಗಳ ಮೂಲಕ ಪರೀಕ್ಷೆಗಳನ್ನು ಮುಂದೂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಭಾಗ ಸಾಂಘಿಕ್ ನಡೆಯುತ್ತಿರುವುದು ಫೆ. 3 ರಂದು ಆದಿತ್ಯವಾರ. ಪರೀಕ್ಷೆಗಳು ನಡೆಯಲಿದ್ದುದು ಫೆ.4 ಸೋಮವಾರ. ಹಾಗಾಗಿ ವಿಭಾಗ ಸಾಂಘಿಕ್ ಗೂ, ಸೋಮವಾರದ
ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂದೂಡಿದ್ದಕ್ಕೂ ಸಂಬಂಧವಿಲ್ಲ ಎಂದು
ಸಮರ್ಥಿಸಲಾಗುತ್ತಿದೆ. ಆದರೆ, ಆದಿತ್ಯವಾರ ದಿನವಿಡೀ ನಡೆಯಲಿರುವ ವಿಭಾಗ ಸಾಂಘಿಕ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸೋಮವಾರದ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಮಾಡಲೂ ಕಷ್ಟಪಡಬೇಕಾಗುತ್ತದೆ. ಮಾತ್ರವಲ್ಲ, ಸೋಮವಾರದ ಪರೀಕ್ಷೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲೂ ತೊಂದರೆಯಾಗುತ್ತದೆ. ಆದುದರಿಂದ ಸೋಮವರದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂದೂಡುವಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕಾಗಿ ಆರ್ಎಸ್ಎಸ್ ನಾಯಕರು, ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಜನಪ್ರತಿನಿಧಿಗಳು, ಸಚಿವರ ಮೂಲಕ ಸರಕಾರಿ ಅಧಿಕಾರಿಗಳಿಗೆ ಮೌಕಿಕ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ. ಆಡಳಿತ ಪಕ್ಷ ಮತ್ತು ಆಡಳಿತ ಪಕ್ಷವನ್ನು ನಿಯಂತ್ರಿಸುತ್ತಿರುವ ಸಂಘಟನೆಯ
ಒತ್ತಡದಿಂದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾವೇ ಸಬೂಬುಗಳನ್ನು ಸೃಷ್ಟಿಸಿಕೊಂಡು ಪರೀಕ್ಷೆ ಮುಂದೂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ವಿಭಾಗ ಸಾಂಘಿಕ್ ನಲ್ಲಿ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸುವ ಗುರಿಯನ್ನು ಸಂಘದ ಸರ್ವಾಧಿಕಾರಿಗಳು ಹೊಂದಿದ್ದಾರೆ. ಆದರೆ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸಲು ಸಂಘದ ನಾಯಕರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ. ಇದರಲ್ಲಿ ಸಂಘದ ಸರ ಸಂಘ ಚಾಲಕರ ಸಹಿತ ಅನೇಕ ಮಂದಿ ಪ್ರಮುಖರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿರುವುದರಿಂದ ಮತ್ತು ಮುಂದಿನ
ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದಿನಲ್ಲಿ ಬಿದ್ದಿರುವ ಸಂಘಕ್ಕೆ ವಿಭಾಗ್ ಸಾಂಘಿಕ್ ಪ್ರತಿಷ್ಟೆಯ ಮತ್ತು ಅತೀ ತುರ್ತಿನ ವಿಷಯವಾಗಿದೆ.
ಪ್ರಿಪೆರ್ಟರಿ ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳು ವಿಭಾಗ್ ಸಾಂಘಿಕ್ ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಂಘದ ನಾಯಕರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡರು, ಆ ಮೂಲಕ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು
ತಿಳಿದುಬಂದಿದೆ.
ಆರ್ಎಸ್ಎಸ್ ಎಂಬೊಂದು ಸಂಘಟನೆ ತಾನು ಹಮ್ಮಿಕೊಂಡಿರುವ ಒಂದು ಸಮಾವೇಶದ ಯಶಸ್ವಿಗಾಗಿ ಸರಕಾರವನ್ನು, ಸರಕಾರಿ ಅಧಿಕಾರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹೀಗೆ ಬಲಿಪಶು ಮಾಡುತ್ತಿರುವುದು, ದುರ್ಬಳಕೆ ಮಾಡುತ್ತಿರುವುದು ಇದೀಗ ವ್ಯಾಪಕ ಚರ್ಚೆ ಮತ್ತು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.