ಉಡುಪಿ: ರಾಜ್ಯದ 224 ಮಂದಿ ಶಾಸಕರಲ್ಲಿ ಒಂದೇ ಒಂದು ದಿನ ಎದ್ದು ನಿಂತು ಚಕಾರ ಶಬ್ದ ಮಾತನಾಡದ ಏಕೈಕ ಶಾಸಕರಿದ್ದರೆ, ಅದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರು. ಇವರಿಗೆ ಇದಕ್ಕಾಗಿ ಬಿರುದು ಕೊಡಬಹುದು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಸಂತ ವಿ.ಸಾಲ್ಯಾನ್ ವ್ಯಂಗ್ಯವಾಡಿದ್ದಾರೆ.
ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ರೇವ್ ಪಾರ್ಟಿಗೆ ಅವಕಾಶ ಮಾಡಿಕೊಟ್ಟ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಮೂವರು ಬಿಜೆಪಿ ಸಚಿವರ ವರ್ತನೆಯನ್ನು ಖಂಡಿಸಿ ಕಾಪು ಬ್ಲಾಕ್ ನ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ನಡೆಸಿದ ಬಹಿರಂಗ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ರಾಜ್ಯ ಸರಕಾರ ಅಭಿವೃದ್ದಿಗಾಗಿ ಅನುದಾನವನ್ನೇ ಬಿಡುಗಡೆ ಮಾಡದೆ ಪಕ್ಷಪಾತ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹೀಗೆ ಮಾಡುತ್ತಿರಲಿಲ್ಲ ಎಂದು ಸಾಲ್ಯಾನ್ ಹೇಳಿದರು.
1994 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಅಂದು ರೂಪಿಸಿದ ನಿಯಮಾವಳಿಗಳ ಪ್ರಕಾರ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಸಂಜೆ ಗಂಟೆ 5 ರ ಬಳಿಕ ಯಾರೊಬ್ಬರೂ ಅಲ್ಲಿ ನಿಲ್ಲುವಂತೆಯೇ ಇರಲಿಲ್ಲ, ಮದ್ಯ ಇತ್ಯಾದಿಗಳನ್ನು ಅಲ್ಲಿ ಕುಡಿಯುಂತಿರಲಿಲ್ಲ. ಆದರೆ ಇದೀಗ ಮದ್ಯ, ಗಾಂಜಾ, ಚರಸ್ ಸಹಿತ ಏನೇನು ಬೇಕೋ ಅದೆಲ್ಲವನ್ನೂ ಐಲ್ಯಾಂಡ್ ಗೆ ಸರಬರಾಜು ಮಾಡಲಾಗಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು, ಯಾರಿದಕ್ಕೆ ಹೊಣೆ ಎಂದು ವಸಂತ ಸಾಲ್ಯಾನ್ ಪ್ರಶ್ನಿಸಿದರು.
ಶಾಸಕ ರಘುಪತಿ ಭಟ್ ಅವರು ನಂಗಾನಾಚ್ ನಲ್ಲಿ ತೊಡಗಿದ್ದ ವಿದೇಶಿ ಜೋಡಿ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲಾ ಮುಖ್ಯಮಂತ್ರಿ ಸದಾನಂದ ಗೌಡರು ಸಮರ್ಥಿಸುತ್ತಾರೆ. ಇವರಿಗೆಲ್ಲ ಜನರು ಧಿಕ್ಕಾರ ಹೇಳಬೇಕು ಎಂದ ಸಾಲ್ಯಾನ್, ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿ ಸಿಕ್ಕಿಬಿದ್ದ ಮೂವರನ್ನೂ ಶಾಕತ್ವದಿಂದ ವಜಾ ಮಾಡಬೇಕು ಎಂದು ಸ್ಫೀಕರ್ ಅವರನ್ನು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಮೃತ್ ಶೆಣೈ, ಸುಧೀರ್ ಹೆಗ್ಡೆ, ರಮೇಶ್ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ಲಕ್ಷ್ಮೀ ನಾರಾಯಣ ಪ್ರಭು, ಅಬ್ದುಲ್ ಅಜೀಜ್ ಹೆಜಮಾಡಿ, ಮಿಥುನ್, ಸಂಧ್ಯಾ ಶೆಟ್ಟಿ, ಸುಧಾಕರ ಪೂಜಾರಿ ಪಾಪೂಜೆ, ಹಬೀಬ್ ಅಲಿ, ಪ್ರವೀಣ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ರಿಯಾಝ್ ಪಳ್ಳಿ, ನರೇಶ್ ಕಾಮತ್, ಶಿವರಾಮ ಶೆಟ್ಟಿ ಕುದಿ, ವಿನೋದ್ ಕುಮಾರ್, ಸುಂದರ ಪೂಜಾರಿ, ಸಂತೋಷ್, ರಾಜು ಪೂಜಾರಿ, ಸಂತೋಷ್ ಶೆಟ್ಟಿ, ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
- vasant salyan bashana 1
- salyan bhashana 2
- m a gafoor bhaashana





















