Posts Tagged ‘kundapura’

ಉಡುಪಿ: ಕುಂದಾಪುರ ಮದ್ದುಗುಡ್ಡೆ ನಿವಾಸಿ ಅಬ್ದುಲ್ ರಹೀಮ್ ಎಂಬವರ ಮಗಳು ಸೂರಯ್ಯ ಎಂಬಾಕೆ ಸೆ.15 ರಿಂದ ಕಾಣೆಯಾಗಿದ್ದಾಳೆ ಎಂದು ಕುಂದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಬುಕಳದ ಬಿ.ಡಿ.ಶೆಟ್ಟಿ ಕಾಲೇಜಿನಲ್ಲಿ ದ್ವಿತಿಯ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಸೂರಯ್ಯ, ಸೆ.15 ರಂದು ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವಳು, ಕಾಲೇಜಿಗೂ ಹೋಗದೆ, ಮನೆಗೂ ಮರಳದೆ, ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ಕುಂದಾಪುರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿದ್ಯಾರ್ಥಿನಿಯ ತಂದೆ
ತಿಳಿಸಿದ್ದಾರೆ.

ಉಡುಪಿ: ಕರ್ನಾಟಕ ಅರಣ್ಯ ಇಲಾಖೆಯ 2007-08 ರ ಯೋಜನೆಯೊಂದು ಅನುಷ್ಟಾನಕ್ಕೆ ಬಾರದೆ ಕೇವಲ ಫಲಕದಲ್ಲಿ ಮಾತ್ರ ಜ್ಯಾರಿಗೊಂಡಿರುವುದು ಬಹಿರಂಗಕ್ಕೆ ಬಂದಿದೆ.
ಅರಣ್ಯ ಇಲಾಖೆಯ ಕುಂದಾಪುರ ವಿಭಾಗವು ಕುಂದಾಪುರ ವಲಯದ ಜಾಲಾಡಿ ಎಂಬಲ್ಲಿ ನದಿಯಲ್ಲಿ ಕಾಂಡ್ಲಾ ಪಥವನ್ನು ವೀಕ್ಷಿಸಲು ದೋಣಿ ವಿಹಾರ ಕೇಂದ್ರವನ್ನು ಆರಂಭಿಸುವುದಾಗಿ ಘೋಷಿಸಿತ್ತು. ಹೀಗೆ ಘೋಷಿಸಿದ್ದು 4 ವರ್ಷಗಳ ಹಿಂದೆ, ಅದ್ದೂರಿ ಸಮಾರಂಭದಲ್ಲಿ. ಹೀಗೆ ಘೋಷಿಸಿದ ಮತ್ತು ಈ ಸಂಬಂಧವಾಗಿ ಅಳವಡಿಸಿದ ಫಲಕದ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರೂ ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇದ್ದರೆಂದು ಬೇರೆ
ಹೇಳಬೇಕಾಗಿಲ್ಲ.
ಕಾಂಡ್ಲಾ ಪಥ ವೀಕ್ಷಿಸಲು ದೋಣಿ ವಿಹಾರ ಕೇಂದ್ರ ಆರಂಭಿಸುತ್ತಿರುವುದಾಗಿ ಹೇಳಿ, ಫಲಕ ಅಳವಡಿಸಿ, ಉದ್ಘಾಟನಾ ಸಮಾರಂಭ ನಡೆದು ನಾಲ್ಕು ವರ್ಷ ಕಳೆದರೂ ಒಂದೇ ಒಂದು ದೋಣಿಯೂ ಇಲ್ಲಿಗೆ ಬಂದಿಲ್ಲ. ಉದ್ಘಾಟನಾ ಸಮಾರಂಭಕ್ಕೆ ಮಾತ್ರ ದೋಣಿ ವಿಹಾರ ಕೇಂದ್ರ ಸೀಮಿತವಾಗಿದೆ. ಅಂದಿನಿಂದ ಇಂದಿನವರೆಗೂ ಕಾಂಡ್ಲಾ ಪಥದ ನದಿಯಲ್ಲಿ ಎಷ್ಟು ನೀರು ಹರಿದುಹೋಗಿದೆಯೋ, ಅದೇ ರೀತಿ ಈ ದೋಣಿ ವಿಹಾರ ಕೇಂದ್ರಕ್ಕಾಗಿ ಹಣದ ಹೊಳೆಯೇ ಹರಿದಿದೆ ಎನ್ನಲಾಗಿದೆ.
ಸರಕಾರ ಬಿಡುಗಡೆ ಮಾಡಿದ ಹಣ ದೋಣಿ ಖರೀದಿಸುವ ಪ್ರಕ್ರೀಯೆಗಾಗಲೀ, ಇದಕ್ಕೆ ಬೇಕಾದ ಇತರ ವ್ಯವಸ್ಥೆಗಳನ್ನು ನಿರ್ಮಿಸಲಿಕ್ಕಾಗಲೀ ಇದುವರೆಗೆ ಚಿಕ್ಕಾಸೂ ವಿನಿಯೋಗವಾಗಿಲ್ಲ. ಸರಿಯಾಗಿ ತನಿಖೆ ನಡೆಸಿದರೆ ಈ ಸಂಬಂಧದ ಭಾರೀ ಹಗರಣವೊಂದು ಬೆಳಕಿಗೆಬರುವುದು ಖಚಿತ. ಸರಕಾರಗಳ ಯೋಜನೆಗಳು ಹಜೇಗೆ ಫಲಕಗಳಲ್ಲಿ ಮತ್ತು ಕಡತಗಳಲ್ಲಿ ಮಾತ್ರ
ಅನುಷ್ಟಾನಗೊಂಡಿರುತ್ತದೆ ಎನ್ನುವುದಕ್ಕೆ ಕುಂದಾಪುರ ವಿಭಾಗದ ಜಾಲಾಡಿಯ ಕಾಂಡ್ಲಾ ಪಥ ವೀಕ್ಷಣಾ ದೋಣಿ ವಿಹಾರ ಕೇಂದ್ರವೇ ಸಾಕ್ಷಿ. ಚಿತ್ರ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಯ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಮಣಿಪಾಲದಿಂದ ಪ್ರಕಟವಾಗುತ್ತಿರುವ ‘ಉದಯವಾಣಿ’ ದಿನ ಪತ್ರಿಕೆಯು ಮೂರನೇ ದಿನವಾದ ಇಂದೂ (ಮಾ.14) ಸಹ ಕಾಸಿಗಾಗಿ ಸುದ್ದಿ ಪ್ರಕಟಿಸಿದೆ.
ಮಾ.14 ರ ುದಯವಾಣಿಯ 12 ನೇ ಪುಟದಲ್ಲಿ ‘ಮೀನುಗಾರರಿಗೆ ರಾಜ್ಯ ಸರಕಾರದ ಬಂಪರ್ ಕೊಡುಗೆ’ ಎಂಬ ಶಿರ್ಷಿಕೆಯಡಿಯಲ್ಲಿ ಬಿಜೆಪಿ ಪರವಾದ ವಿಶೇಷ ಬರಹವನ್ನು ಪ್ರಕಟಿಸಿ ಪತ್ರಿಕಾರಂಗಕ್ಕೆ ಕಳಂಕ ಹಚ್ಚಿದೆ. ಈ ಬರಹದೊಂದಿಗೆ ಮೀನುಗಾರಿಕಾ ನಿಗಮದ ಅಧ್ಯಕ್ಷರ ಹಾಗೂ ಮೀನುಗಾರಿಕಾ ಫಡರೇಶನಿನ ಅಧ್ಯಕ್ಷರ ಅಭಿಪ್ರಾಯಗಳನ್ನೂ ಪ್ರಕಟಿಸಿದೆ. ಇವರಿಬ್ಬರೂ ಬಿಜೆಪಿ ನಾಯಕರೂ ಹೌದು.
ಕಳೆದ ಮೂರ್ನಾಲ್ಕು ದಿನಗಳಿಂದ ಉದಯವಾಣಿಯ 12 ನೇ ಪುಟದಲ್ಲಿ ಪ್ರತಿದಿನವೂ ಬಿಜೆಪಿ ಪರವಾದ ವಿಶೇಷ ಲೇಖನಗಳು ಪ್ರಕಟವಾಗುತ್ತಿದ್ದು, ಇವುಗಳನ್ನು ಸಂಬಂಧಪಟ್ಟವರಿಂದ ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಲೇಖನದ ರೂಪದಲ್ಲಿ ಉದಯವಾಣಿ ಪ್ರಕಟಿಸುತ್ತಿದೆ.
ಬಿಜೆಪಿ ಮತ್ತು ಉದಯವಾಣಿ ಈ ಮೂಲಕ ಚುನಾವಣಾ ಆಯೋಗ, ಚುನಾವಣಾ ವೀಕ್ಷಕರು, ಸರಕಾರವನ್ನು ವಂಚಿಸುತ್ತಿದೆ. ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಕಾಂಗ್ರೆಸ್ ನಾಯಕರಾಗಲೀ, ಜೆಡಿಎಸ್ ನಾಯಕರಾಗಲೀ ಕಾಸಿಗಾಗಿ ಸುದ್ದಿಯ ವಿರುದ್ದ ಸಂಬಂಧಪಟ್ಟವರಿಗೆ ಇನ್ನೂ ಸಹ ದೂರು ನೀಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಉಡುಪಿ: ಪ್ರಸಾರ ಭಾರತಿ ಮತ್ತು ಮಂಗಳೂರು ಆಕಾಶವಾಣಿ ವತಿಯಿಂದ ಆಯೋಜಿಸಿರುವ ‘ಆಕಾಶವಾಣಿ ಹಬ್ಬ’ ಎಂಬ ವಿಶಿಷ್ಟವೂ, ವಿನೂತನವೂ ಆದ ಕಾರ್ಯಕ್ರಮ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಫೆ.12 ರಂದು ಆರಂಭಗೊಂಡಿತು.
ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಎಂ.ವಿ.ಕಾಮತ್ ಹಬ್ಬವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಅಂಬಾತನಯ ಮುದ್ರಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ.ಜಿ.ಶಂಕರ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಸಂತಕುಮಾರ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು.
ರಮೇಶ್ಚಂದ್ರ, ಸದಾನಂದ ಹೊಳ್ಳ, ನಾರಾಯಣಿ ದಾಮೋದರ್ ಹಾಗೂ ಯು.ಎಸ್.ಶೆಣೈ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದ ಬಳಿಕ ‘ಸಾಮಾಜಿಕ ಸಾಂಸ್ಕೃತಿಕ ಅಭ್ಯುದಯಕ್ಕೆ ಆಕಾಶವಾಣಿಯ ಕೊಡುಗೆ’ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಿತು. ಎ.ಎಸ್.ಎನ್.ಹೆಬ್ಬಾರ್, ಪ್ರೊ.ಪಾರ್ವತಿ ಜಿ.ಐತಾಳ್, ಡಾ.ಮಹಾಬಲೇಶ್ವರ ರಾವ್ ಹಾಗೂ ಯು.ಎಸ್.ಶೆಣೈ ವಿಚಾರಗಳನ್ನು ಮಂಡಿಸಿದರು.
ಬಳಿಕ ವಸಂತ ಬನ್ನಾಡಿ ಅವರ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಟಿ ನಡೆಯಿತು. ಇದರಲ್ಲಿ ಹತ್ತು ಮಂದಿ ಕವಿಗಳು ಭಾಗವಹಿಸಿದ್ದರು. ನಂತರ ಮಂದರ್ತಿ- ತಂತ್ರಾಡಿಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾರಂಗ ಮಕ್ಕಳ ಮೇಳ ಇದರ ಬಾಲ ಕಲಾವಿದರು ‘ಶ್ರೀಕೃಷ್ಣಾಶ್ವಮೇಧ’ ಯಕ್ಷಗಾನ ಪ್ರದರ್ಶಿಸಿದರು.
ಆಕಾಶವಾಣಿ ಹಬ್ಬವು ಫೆ.18 ರಂದು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಸಮಾರೋಪಗೊಳ್ಳಲಿದೆ.

ಉಡುಪಿ: ಉತ್ಸವ ಮತ್ತು ಆಚರಣೆಗಳ ಮೂಲಕ ಕರಾವಳಿಯ ಸಾಂಸ್ಕೃತಿಕ ಸಂಪನ್ನತೆಯನ್ನು ಪ್ರೇಕ್ಷಕರ ಮುಂದೆ ಅನಾವರಣ ಮಾಡುತ್ತಾ ಹೊಸ ಎಚ್ಚರ ಹಾಗೂ ಜಾಗೃತಿಯನ್ನು ಮೂಡಿಸಿ, ಯುವಜನರನ್ನು ದೇಸಿಯತೆಯ ಕಡೆಗೆ ಆಕರ್ಷಿಸುವಂತೆ ಮಾಡುವ ಹೆಜ್ಜೆಯಾಗಿ ಪ್ರಸಾರ ಭಾರತಿಯು ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಲ್ಲಿ ಏಕ ಕಾಲಕ್ಕೆ ಆಕಾಶವಾಣಿ ಮೂಲಕ ‘ಆಕಾಶವಾಣಿ ಹಬ್ಬ’ ಎಂಬ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಅಂಗವಾಗಿ ಮಂಗಳೂರು ಆಕಾಶವಾಣಿಯು ಫೆ.12 ರಿಂದ 18 ರ ವರೆಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ವಸಂತಕುಮಾರ್ ಪೆರ್ಲ ಅವರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಫೆ.9 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಆಕಾಶವಾಣಿ ಹಬ್ಬದ ಬಗ್ಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಪ್ರತಿದಿನ ಸಂಜೆ ಮೂರು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನದ ಕಾರ್ಯಕ್ರಮಗಳು ಮರುದಿನ ಸಂಜೆ ಗಂಟೆ 5.30 ರಿಂದ 6 ರ ವರೆಗೆ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ. (ತರಂಗಾಂತರ: f.m.100.3mhrtz, a.m.:275.5mtrs/1089 k.hrtz}
ಫೆ.12 ರಂದು ಸಂಜೆ ಗಂಟೆ 4.30 ಕ್ಕೆ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಬ್ಬ ಉದ್ಘಾಟನೆಗೊಳ್ಳಲಿದೆ. ಯುವ ಕವಿಗೋಷ್ಟಿ, ವಿಚಾರ ಸಂಕಿರಣ, ಮಕ್ಕಳ ಯಕ್ಷಗಾನ ನಡೆಯಲಿದೆ. ಈ ಕಾರ್ಯಕ್ರಮಗಳು ಬಾಲ ತರಂಗ ಎಂಬ ಹೆಸರಲ್ಲಿ ನಡೆಯಲಿದೆ. ಫೆ.13 ರಂದು ಸಂಜೆ 5 ಗಂಟೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಭಾವ ತರಂಗ ಜರುಗಲಿದೆ. ಇಲ್ಲಿ ಕೊಂಕಣಿ ಕಾರ್ಯಕ್ರಮ, ಭಾವಗೀತೆಗಳ ಗಾಯನ, ಹಾಡು, ನೃತ್ಯ, ನಾಟಕ ಪ್ರದರ್ಶನಗೊಳ್ಳಲಿದೆ. ಫೆ.14 ರಂದು ಸಂಜೆ ಗಂಟೆ 5.30 ಕ್ಕೆ ಮಂಗಳೂರಿನ ಡಾನ್ ಬಾಸ್ಕೊ ಹಾಲ್ ನಲ್ಲಿ ರಂಗ ತರಂಗ ನಡೆಯಲಿದೆ. ಇಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆ. 15 ರಂದು ಸಂಜೆ ಗಂಟೆ 4.15 ಕ್ಕೆ ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಯುವ ತರಂಗ ನಡೆಯಲಿದೆ. ಇಲ್ಲಿ ಕೃಷಿ ವಿಚಾರ ಸಂಕಿರಣ, ದೃಶ್ಯ ರೂಪಕ, ವಿದ್ಯಾರ್ಥಿಗಳಿಂದ ವೈವಿದ್ಯಮಯ ಕಾರ್ಯಕ್ರಮ ನಡೆಯಲಿದೆ. ಫೆ.16 ರಂದು ಸಂಜೆ ಗಂಟೆ 3.30 ಕ್ಕೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಾದ ತರಂಗ ಪ್ರಸ್ತುತಿಗೊಳ್ಳಲಿದೆ. ಇಲ್ಲಿ ಸ್ಯಾಕ್ಸೊಫೋನ್ ವಾದನ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಗಾಯನ ನಡೆಯಲಿದೆ. ಫೆ.17 ರಂದು ಸಂಜೆ ಗಂಟೆ 5.30 ಕ್ಕೆ ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಯಕ್ಷ ತರಂಗ ನಡೆಯಲಿದೆ. ಇಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಫೆ.18 ರಂದು ಸಂಜೆ ಗಂಟೆ 3.30 ರಿಂದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಕಾವ್ಯ ತರಂಗ ನಡೆಯಲಿದೆ. ಇಲ್ಲಿ ಕೊಂಕಣಿ ಹಾಡು, ನೃತ್ಯ, ಕವಿಗೋಷ್ಟಿ, ಯಕ್ಷಗಾನ ನಡೆಯಲಿದೆ ಎಂದು ವಸಂತಕುಮಾರ್ ಪೆರ್ಲ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಂಗಳೂರು ಆಕಾಶವಾಣಿಯ ಡಾ.ಸದಾನಂದ ಹೊಳ್ಳ, ಫೋರಿನ್ ರೋಝ್, ಶರಭೇಂದ್ರ ಸ್ವಾಮಿ, ಅಶೋಕ್ ಹಾಗೂ ಮಂಜೇಶ್ವರ ಗೋವಿಂದ ಪೈ ಸಂಶೋದನಾ ಕೇದ್ರದ ಪ್ರೊ.ಹೇರಂಜೆ ಕೃಷ್ಣ ಭಟ್ ಉಪಸ್ಥಿತರಿದ್ದರು.

ಉಡುಪಿ: ಕಚೇರಿಯಲ್ಲೇ ರಾಸಲೀಲೆಯಾಡುವ, ಭಾರೀ ಅವ್ಯವಹಾರದಲ್ಲಿ ನಿರತರಾಗಿರುವ, 12 ಕ್ಕೂ ಅಧಿಕ ಮಂದಿ ಸರಕಾರೀ ನೌಕರರು ವಿವಿಧ ರೀತಿಯಲ್ಲಿ ಸಾವಿಗೀಡಾಗಲು ಕಾರಣರಾದ, ದಲಿತ ಅಧಿಕಾರಿಗಳನ್ನು ಹಾಗೂ ನೌಕರರನ್ನು ಜೀತದಾಳುಗಳಂತೆ ದುಡಿಸುತ್ತಾ ಶೋಷಿಸುತ್ತಿರುವ ಅಬಕಾರಿ ಇಲಾಖೆಯ ಉಡುಪಿ ಜಿಲ್ಲಾ ಉಪ ಆಯುಕ್ತ ಎಂ.ಕೆ.ಸೋಮಯ್ಯ ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಮತ್ತು ಕೂಡಲೇ ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಜಯನ್ ಮಲ್ಪೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಅರ್ಜಿ ಸಲ್ಲಿಸಿ ಪಡೆದುಕೊಂಡ ಅಬಕಾರಿ ಇಲಾಖೆಯ ಹಲವಾರು ಕಡತಗಳನ್ನು ಪರಿಶೀಲಿಸಿ, ಸಮಗ್ರ ತನಿಖೆ ನಡೆಸಿದ ಬಳಿಕ ಸೋಮಯ್ಯ ಅವರ ವಿರುದ್ಧ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ ದೂರಿನ ಪ್ರತಿಗಳೊಂದಿಗೆ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಸೋಮಯ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಜಯನ್ ಮುನ್ನೆಚ್ಚರಿಕೆ ನೀಡಿದ್ದಾರೆ.
ಸೋಮಯ್ಯ ರವರ ನಿರಂತರ ಕಿರುಕುಳ, ಭಯ, ವಿವಿಧ ರೀತಿಯ ಊತ್ತದ ಇತ್ಯಾದಿಗಳಿಂದಾಗಿ ಈಗಾಗಲೇ ಇಲಾಖೆಯ 12 ಕ್ಕೂ ಅಧಿಕ ಮಂದಿ ನೌಕರರು ಆತ್ಮಹತ್ಯೆ, ಹೃದಯಾಘಾತವೇ ಮೊದಲಾದ ಕಾರಣಗಳಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಜಯನ್ ಮಲ್ಪೆ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 9 ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲೇ ಗೂಟ ಹೊಡೆದುಕೊಂಡಿರುವ ಸೋಮಯ್ಯನವರು, ಪ್ರತಿ ನಿತ್ಯ ತಾವು ಸ್ನಾನ ಮಾಡುವಾಗ ಹಾಕಿಕೊಳ್ಳುವ ಒಳ ಚಡ್ಡಿಯನ್ನು ನೌಕರರಿಂದ ಒಗೆದು ಹಾಕಿಸುತ್ತಾರೆ, ಶೌಚಾಲಯವನ್ನು ನೌಕರರಿಂದ ಸ್ವಚ್ಚಗೊಳಿಸುತ್ತಾರೆ, ಬಟ್ಟೆ ಬರೆಗಳನ್ನು ಒಗೆಸಿ, ಇಸ್ತ್ರಿ ಹಾಕಿಸುತ್ತಾರೆ, ಬಟ್ಟಲು, ಲೋಟಗಳನ್ನು ತೊಳೆಸುವುದರ ಜೊತೆಗೆ ರಾತ್ರಿ ತಾವು ಮಲಗುವ ಹಾಸಿಗೆಯನ್ನೂ ಹಾಸುವ ಕೆಲಸವನ್ನೂ ಇಲಾಖಾ ನೌಕರರಿಂದ ಮಾಡಿಸುವ ಮೂಲಕ ನೌಕರರನ್ನು ಜೀತದಾಳುಗಳಂತೆ ದುಡಿಸುತ್ತಾರೆ ಎಂದು ದಸಂಸ ನಾಯಕ ಜಯನ್ ಅಪಾದಿಸಿದ್ದಾರೆ.
ಕುಂದಾಪುರ ತಾಲೂಕಿನ ಅಬಕಾರಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಯೊಬ್ಬರ ಜೊತೆ ವಿಶೇಷ ವ್ಯಾಮೋಹ ಹೊಂದಿರುವ ಸೋಮಯ್ಯರು, 2010 ರ ಫೆಬ್ರವರಿಯಿಂದ ಕುಂದಾಪುರ ಅಬಕಾರಿ ವಲಯಕ್ಕೆ ಮಾತ್ರ ಮದ್ಯದ ವಾರ್ಷಿಕ ಬಳಕೆ ಗುರಿ ನಿಗದಿಯಲ್ಲಿ ತಿಂಗಳಿಗೆ 1600 ಪೆಟ್ಟಿಗೆ ಕಡಿಮೆ ಪೆಟ್ಟಿಗೆಗಳನ್ನು ಕಡಿಮೆ ನಿಗದಿ ಮಾಡುವ ಮೂಲಕ ಸರಕಾರೀ ಬೊಕ್ಕಸಕ್ಕೆ ಕನಿಷ್ಠ 5 ಕೋಟಿ ರು. ಗೂ ಅಧಿಕ ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
ಉಡುಪಿಯ ಪಂದುಬೆಟ್ಟು ಬಳಿ 2005 ರ ಜುಲೈ ೧೪ ರಂದು ನಕಲಿ ಮದ್ಯದ ಮಿಶ್ರಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವ ಅಬಕಾರಿ ಇಲಾಖೆಯು, ಸೋಮಯ್ಯರವರ ಒತ್ತಡದ ಕಾರಣ ಇದುವರೆಗೂ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದೆ ಆರೋಪಿಗಳನ್ನು ರಕ್ಷಿಸಿದ್ದಾರೆ ಎಂದು ಆಪಾದಿಸಿರುವ ಜಯನ್ ಅವರು, ಇದೀಗ ಮಾಹಿತಿ ಹಕ್ಕು ಪ್ರಕಾರ ಅರ್ಜಿ ಸಲ್ಲಿಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದ ಬಳಿಕ ದೋಷಾರೋಪಣಾ ಪಟ್ಟಿ ಸಲ್ಲಿಸಲು ಪ್ರಕ್ರೀಯೆ ಆರಂಭಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಜಿಲ್ಲೆಯಾದ್ಯಂತ ಹಲವಾರು ಬಾರ್ ಮತ್ತು ವೈನ್ ಶಾಪ್ ಗಳಿಗೆ ಅಬಕಾರಿ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಸೋಮಯ್ಯ ಅವರು ಪರವಾನಿಗೆ ನೀಡಿದ್ದಾರೆ. ಮೇಲಾಧಿಕಾರಿಗಳಿಗೆ ಹಾಗೂ ಸಾರ್ವಜನ್ನಿಕರ ಗಮನಕ್ಕೆ ಬಾರದಂತೆ ಅಚ್ಚುಕಟ್ಟಾಗಿ ಸೋಮಯ್ಯ ಅವರು ಈ ಅಕ್ರಮವನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಾಗಿದ್ದ ಪುಟ್ಟ ಸ್ವಾಮೀ ( ಮಂಗಳೂರು ವಿಭಾಗ), ಎಸ್ ಡಿ ಎ ಉದ್ಯೋಗಿ ಶ್ರೀಮತಿ ಲಕ್ಷ್ಮಿ, ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದುಕೊಂಡ ಡಿ ದರ್ಜೆಯ ನೌಕರೆ ಶ್ರೀಮತಿ ಪ್ರೇಮ, ಡಿ ಗ್ರೂಪ್ ನೌಕರೆ ಶಶಿಕಲಾ ಮೊದಲಾದವರು ಸೋಮಯ್ಯ ಅವರ ವಿವಿಧ ರೀತಿಯ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದವರಲ್ಲಿ ಕೆಲವರು ಎಂದು ಜಯನ್ ತಿಳಿಸಿದ್ದಾರೆ.
ಕೇವಲ ಎರಡೇ ವರ್ಷದಲ್ಲಿ 32 ಅಬಕಾರಿ ಪ್ರಕರಣ ಪತ್ತೆ ಹಚ್ಚಿ ನಕಲಿ ಮದ್ಯ ಮಾರಾಟಗಾರರಿಗೆ ಸಿಂಹಸ್ವಪ್ನವಾಗಿದ್ದ ಅಬಕಾರಿ ನಿರೀಕ್ಷಕರಾದ ಹನುಮಂತಪ್ಪ ಅವರನ್ನು ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿ ಸೋಮಯ್ಯ ಅವರನ್ನು ಆಗುವಂತೆ ಮಾಡಿದ್ದಾರೆ. ಹಲವರಿಗೆ ಭಡ್ತಿ ನೀಡದೆ ವಂಚಿಸಿದ್ದಾರೆ ಎಂದೂ ಜಯನ್ ದೂರಿದ್ದಾರೆ.
ದಲಿತರು, ಕಪ್ಪು ಬಣ್ಣದವರು, ಚಂದ ಇಲ್ಲ ಎಂಬ ಕಾರಣಗಳಿಗೆ ದಲಿತ ನೌಕರರನ್ನು ತನ್ನ ಕೊಠಡಿಗೆ ಬಾರದಂತೆ ಎಚ್ಚರಿಕೆ ನೀಡಿರುವ ಸೋಮಯ್ಯ ದಲಿತ ವಿರೋಧಿಯಾಗಿದ್ದಾರೆಂದು ಜಯನ್ ಸ್ಪಷ್ಟಪದಿಸಿದ್ದಾರೆ.

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೃಷಿಕರು ಅನುಭವಿಸುಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃಷಿಕರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುವ ಉದ್ಧೇಶದಿಂದ ಡಿ.24 ರಂದು ಮಧ್ಯಾಹ್ನ ಗಂಟೆ 2.30 ಕ್ಕೆ ಕುಂದಾಪುರದ ಹಂಗಳೂರು ವೆಂಕಟಲಕ್ಷ್ಮಿ ಸಭಾ ಭವನದಲ್ಲಿ ಗೆರುಲೀಸ್ ಮತ್ತು ಕುಮ್ಕಿ ರೈತರ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಉಡುಪಿ ಜಿಲ್ಲಾ ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಡಿ.20 ರಂದು ಕರೆದ ಮಾಧ್ಯಮ ಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳು ಕೃಷಿಕರ ಸಮಸ್ಯೆಗಳ ಬಗ್ಗೆ ವಿವರ ನೀಡಿದರು.
ಬಂಜರು ಭೂಮಿ ಮತ್ತು ಗೇರು ಕೃಷಿಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 1957 ರಲ್ಲಿ 30 ವರ್ಷಗಳ ಲೀಸಿಗೆ ಭೂಮಿಯನ್ನು ಕೃಷಿಕರಿಗೆ ಸರಕಾರ ಹಂಚಿಕೆ ಮಾಡಿತ್ತು. ಸರಕಾರೀ ಆಜ್ಞೆಯ ಪ್ರಕಾರ 1987- 88 ರಲ್ಲಿ ಈ ಭೂಮಿಯ ಒಡೆತನದ ಹಕ್ಕನ್ನು ಕೃಷಿಕರಿಗೆ ನೀಡಬೇಕಾಗಿತ್ತು. ಆದರೆ ಸರಕಾರ ಇದುವರೆಗೆ ನೀಡಿಲ್ಲ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಸರಕಾರೀ ಅಧಿಕಾರಿಗಳು ತೆಗೆದುಕೊಂಡ ಒಂದು ನಿರ್ಣಯದ ಬಗ್ಗೆ ಈ ಕೃಷಿಕರು ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ಈ ತೀರ್ಮಾನವನ್ನು ಹಕ್ಕೊತ್ತಾಯ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಎಂದು ಸಮಾಜದ ಪ್ರಮುಖರು ಹೇಳಿದರು.
ನೂರು ವರ್ಷಕ್ಕೂ ಮಿಗಿಲಾಗಿ ಕೃಷಿಕರು ತಮ್ಮ ಕುಮ್ಕಿ ಹಕ್ಕನ್ನು ಅನಿಭಾವಿಸಿಕೊಂಡು ಬರುತ್ತಿದ್ದಾರೆ. 1971 ರ ತನಕ ಕುಮ್ಕಿ ಭೂಮಿಯನ್ನು ಕುಮ್ಕಿದಾರರಿಗೆ ದರ್ಖಾಸು ಆಗಿ ನೀಡುತ್ತಿದ್ದ ಸರಕಾರ, 1974 ರ ಭೂ ಮಸೂದೆಯ ತಿದ್ದುಪಡಿಯ ಬಳಿಕ ಕುಮ್ಕಿ ಹಕ್ಕನ್ನು ಉರ್ಜಿತದಲ್ಲಿತ್ತು ದರ್ಖಾಸಿಗೆ ಕೊಡುವ ಪದ್ದತಿಯನ್ನು ತಡೆಹಿಡಿದಿದೆ. ಮತ್ತೆ ಕುಮ್ಕಿ ಹಕ್ಕನ್ನು ಜ್ಯಾರಿಗೊಳಿಸಬೇಕು ಎಂದು ಒತ್ತಾಯಿಸುವುದು ಹಕ್ಕೊತ್ತಾಯ ಸಭೆಯ ಮತ್ತೊಂದು ಮುಖ್ಯ ಉದ್ಧೇಶ ಎಂದು ಸಮಾಜದ ಪದಾಧಿಕಾರಿಗಳು ಮಾಹಿತಿ ನೀಡಿದರು.
ಸರಕಾರೀ ಭೂಮಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆಕಟ್ಟಿಕೊಂಡು ವಾಸವಾಗಿರುವ ಬಡವರು 94 ಸಿ ಪ್ರಕಾರ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಭೂಮಿ ಗೋಮಾಳ ಎಂಬ ಏಕೈಕ ಕಾರಣ ಕೊಟ್ಟು ತಿರಸ್ಕರಿಸಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಕೃಷಿಕರು ಕೃಷಿ ಭೂಮಿಯಲ್ಲಿ ಮನೆಕಟ್ಟಿಕೊಂಡು ಜಾನುವಾರುಗಳನ್ನು ಮೇವಿಗಾಗಿ ಬೇರೆಡೆಗೆ ಕೊಂದೊಯ್ಯುತ್ತಿರುವುದರಿಂದ ಇಲ್ಲಿ ಗೋಮಾಳದ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ 94 ಸಿ ಪ್ರಕಾರ ಅರ್ಜಿ ಸಲ್ಲಿಸಿದವರಿಗೆ ಅವರು ವಾಸವಾಗಿರುವ ಭೂಮಿಯನ್ನು ನೀಡಬೇಕು ಎಂದು ಹಕ್ಕೊತ್ತಾಯ ಸಭೆ ಆಗ್ರಹಿಸಲಿದೆ ಎಂದು ಸಮಾಜದ ನಾಯಕರು ತಿಳಿಸಿದರು.
ಫಾರಂ ನಂಬರ್ 50 ಮತ್ತು 53 ರ ಪ್ರಕಾರ ಅರ್ಜಿ ಸಲ್ಲಿಸಿ ಅಕ್ರಮ ಸಕ್ರಮ ಮಾಡಿಕೊಡುವಂತೆ ಅನೇಕ ಮಂದಿ ಬಡ ಕೃಷಿಕರು ವಿನಂತಿ ಮಾಡಿಕೊಂಡಿದ್ದಾರೆ. ಆದರೆ ಸರಕಾರೀ ಅಧಿಕಾರಿಗಳು ಈ ಭೂಮಿ ಡೀಮ್ಡ್ ಫಾರೆಸ್ಟ್ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥ ಮಾಡದೆ ಇರಿಸಿದ್ದಾರೆ. ಇದರಿಂದಾಗಿ ಸಮಸ್ಯೆಯಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಲ್ಲಬೇಕಾಗಿದೆ ಎಂದು ಕೃಷಿಕ ಸಮಾಜದ ಮುಖಂಡರು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡ್ಗಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಹೆಬ್ಬಾರ್, ಉಡುಪಿ ತಾಲೂಕು ಅಧ್ಯಕ್ಷ ಸುಭಾಶಿತ್ ಕುಮಾರ್, ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಹಾಗೂ ಕಾರ್ಕಳ ತಾಲೂಕು ಅಧ್ಯಕ್ಷ ನವೀನಚಂದ್ರ ಜೈನ್ ಉಪಸ್ಥಿತರಿದ್ದರು.