Posts Tagged ‘karnataka komu souharda vedike’

ಉಡುಪಿ: ರಾಜ್ಯದ ಗೃಹ ಸಚಿವರು ನಂ 1 ಕ್ರಿಮಿನಲ್. ಉಡುಪಿಯ ಶಾಸಕರೂ ಒಬ್ಬ ಗೂಂಡಾ. ಇಡೀ ವ್ಯವಸ್ಥೆಯೇ ಕ್ರಿಮಿನಲ್ ಆಗಿದೆ. ಕರಾವಳಿ ಜಿಲ್ಲೆಗಳ ಪೊಲೀಸ್ ಠಾಣೆಗಳು ಬಜರಂಗ ದಳ ಕಾರ್ಯಕರ್ತರ ಅಡ್ಡೆಯಾಗಿದೆ. ಪೊಲೀಸರು ಕ್ರಿಮಿನಲ್ ಗಳ ಬಂಟರಂತೆ
ವರ್ತಿಸುತ್ತಿದ್ದಾರೆ. ಇಲ್ಲಿನ ಪೊಲೀಸರ ದೃಷ್ಠಿಯಲ್ಲಿ ಪೆಟ್ಟು ತಿಂದವರೇ
ಅಪರಾಧಿಗಳಾಗಿದ್ದಾರೆ. ಇದಕ್ಕೆ ಇತ್ತೀಚೆಗಿನ ಉದಾಹರಣೆಯೇ ಹಿರಿಯಡ್ಕ ಪೊಲೀಸ್ ಠಾಣೆ. ಇಲ್ಲಿನ ಪಿಎಸ್ಐ ಒಬ್ಬ ಕಾನ್ ಸ್ಟೇಬಲ್ ಆಗಲೂ ನಾಲಾಯಕ್ಕು..
ಹೀಗೆ ಸಚಿವರು, ಶಾಸಕರು, ಪೊಲೀಸರ ವಿರುದ್ಧ ಮಾತಿನ ಚಾಟಿ ಬೀಸಿದವರು ಖ್ಯಾತ ಚಿಂತಕ, ಹಿರಿಯ ವಿಮರ್ಶಕ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್.
ಅಮ್ಮುಂಜೆಯ ಯುವಕರ ಮೇಲೆ ಪೆರ್ಡೂರಿನ ಬಜರಂಗ ದಳದ ಕಾರ್ಯಕರ್ತರು ಕುಕ್ಕೆಹಳ್ಳಿಯಲ್ಲಿ ನಡೆಸಿದ ಹಲ್ಲೆ ಮತ್ತು ದರೋಡೆ ಕೃತ್ಯವನ್ನು ಖಂಡಿಸಿ ಹಾಗೂ ಘಟನೆ ನಡೆದು 6 ದಿನಗಳಾದರೂ ಆರೋಪಿಗಳನ್ನು ಬಂಧಿಸದೆ ರಕ್ಷಿಸುತ್ತಿರುವ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ರವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಶಾಖೆಯು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಮಂಗಳವಾರ ನಡೆಸಿದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ರಾಜಶೇಖರ್ ಮಾತನಾಡುತ್ತಿದ್ದರು. ದಲಿತರ ಮೌನವನ್ನು ದೌರ್ಬಲ್ಯವೆಂದು ತಿಳಿದುಕೊಳ್ಳುವ ಅಗತ್ಯವಿಲ್ಲ. ದಲಿತರ ಮೇಲೆ ಬಜರಂಗ ದಳ ಕಾರ್ಯಕರ್ತರು ಇದೇ ರೀತಿ ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದೇ ಆದಲ್ಲಿ ಮುಂದೆ ದಲಿತ ಯುವಕರು ಬಜರಂಗ ದಳಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು
ಮುನ್ನೆಚ್ಚರಿಕೆ ನೀಡಿದ ದಸಂಸ ಜಿಲ್ಲಾ ಪ್ರದನ ಸಂಚಾಲಕ ಜಯನ್ ಮಲ್ಪೆ, ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿಗೆ ಕಣ್ಣು, ಕಿವಿ ಒಂದೂ ಇಲ್ಲ ಎಂದು ಆರೋಪಿಸಿದರು.
ಉದ್ಯಾವರ ಚರ್ಚ್ ನ ಧರ್ಮಗುರುಗಳಾದ ಫಾ.ವಿಲಿಯಂ ಮಾರ್ಟಿಸ್, ಖ್ಯಾತ ಚಿಂತಕರಾದ ಪ್ರೊ.ಹಯವದನ ಮೂಡುಸಗ್ರಿ, ಪ್ರೊ.ಕೆ.ಫಣಿರಾಜ್, ಭಾರತೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಜಿಲ್ಲಾದ್ಯಕ್ಷ ಲೂಯಿಸ್ ಲೋಬೊ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೆರೋನಿಕಾ ಕರ್ನೆಲಿಯೊ ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದರು.
ಪ್ರತಿಭಟನೆ ನಡೆಯುತ್ತಿದ್ದಾಗ ಸ್ಥಳಕ್ಕೆ ಬಂದ ಉಡುಪಿ ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾಣೆ ಮನವಿ ಸ್ವೀಕರಿಸಿ, ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ನಾಯಕರಾದ ಪ್ರೊ.ಸಿರಿಲ್ ಮಥಾಯಸ್, ವಾಲ್ಟರ್ ಪಿಂಟೊ, ಖತೀಬ್ ಅಬ್ದುಲ್ ರಶೀದ್, ಜಮಾಅತೆ ಇಸ್ಲಾಮಿ ಹಿಂದ್ ನಾಯಕರಾದ ಮುಹಮ್ಮದ್ ಇದ್ರಿಸ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ಸಿಎಫ್ಐ ಮುಖಂಡರು, ಜಿ.ಪಂ.ಸದಸ್ಯೆ ಮಲ್ಲಿಕಾ ಅಶೋಕ್, ದಸಂಸ ನಾಯಕರಾದ ಶೇಖರ ಹೆಜ್ಮಾಡಿ, ಗಣೇಶ್ ನೆರ್ಗಿ, ಸುಂದರ ಕಪ್ಪೆಟ್ಟು, ಸುಂದರಿ ಪುತ್ತೂರು, ಸರೋಜಾ ನೇಜಾರು ಮೊದಲಾದವರು ಪ್ರತಿಭಟನಾ ದರಣಿಯ ನೇತೃತ್ವ ವಹಿಸಿದ್ದರು.

ಉಡುಪಿ: ಇತ್ತೀಚೆಗೆ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಪೋಲೀಸರಿಂದ ಬಂಧಿತರಾದ ಶಂಕಿತ ಉಗ್ರರು ಉಗ್ರರೇ ಆಗಿದ್ದಲ್ಲಿ ಈ ಬಗ್ಗೆ ನಿಷ್ಪಕ್ಷಪಾತ ವಿಚಾರಣೆ ನಡೆದು ಶಿಕ್ಷೆಯಾಗಲೇಬೇಕು. ಆದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ದಕ್ಷ ಹಾಗೂ ಜಾತ್ಯಾತೀತ ಪೋಲೀಸ್ ಅಧಿಕಾರಿಗಳು ನೇಮಕವಾಗಬೇಕು. ಶಂಕಿತ ಉಗ್ರರ ಆರೋಪಿತ ಉದ್ಧೇಶಗಳು ಮತ್ತು ಹಿನ್ನೆಲೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರಕುವ ಮೊದಲೇ ಇಡೀ ಮುಸ್ಲೀಮ್ ಸಮುದಾಯದ ಮೇಲೆಯೇ ಅನುಮಾನವನ್ನು ಹುಟ್ಟುಹಾಕುವ ರೀತಿಯಲ್ಲಿ ಬಹುದೊಡ್ಡ ಮಾಧ್ಯಮ ವಿಭಾಗ ಸತತವಾಗಿ ವರದಿಗಳನ್ನು ಪ್ರಕಟಿಸುತ್ತಿರುವುದು ಹಾಗೂ ಶಂಕಿತ ಉಗ್ರರನ್ನು ನೇರವಾಗಿ ‘ಉಗ್ರರು’ ಎಂದು ಬಿಂಬಿಸುತ್ತಿರುವುದು ಮಾತ್ರ ಅತ್ಯಂತ ಆತಂಕಕಾರಿ, ಕಳವಳಕಾರಿ, ಖಂಡನಾರ್ಹ ಮತ್ತು ಆಕ್ಷೇಪಾರ್ಹ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ, ಖ್ಯಾತ ಚಿಂತಕ ಜಿ.ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋಮು ಸೌಹಾರ್ದ ವೇದಿಕೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕಗಳು ಜಂಟಿಯಾಗಿ ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯದ ರೀತಿಯಲ್ಲಿ ಪೋಲೀಸರು ಹಾಗೂ ಗುಪ್ತಚರ ಇಲಾಖೆಯವರು ಆಯ್ದ ಮಾಹಿತಿಗಳನ್ನು ಸೋರಿ ಬಿಡುತ್ತಿರುವುದನ್ನು ಮತ್ತು ಅವುಗಳನ್ನು ಕೆಲವು ಅಕ್ಷರ- ದೃಶ್ಯ ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡುತ್ತಾ ನ್ಯಾಯ ಪ್ರಕ್ರಿಯೆಗೇ ತೊಡರುಗಾಲಾಗುತ್ತಿದೆ ಎಂದು ರಾಜಶೇಖರ್ ಟೀಕಿಸಿದರು. ಬಂಧಿತರ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ಅವರು ಅಪರಾಧಿಗಳು ಎಂಬ ತೀರ್ಮಾನ ಪ್ರಕಟವಾಗುವವರೆಗೂ ಅವರು ನಿರಪರಾಧಿಗಳು ಎಂದೇ ಪರಿಗಣಿಸಬೇಕು ಎಂಬುದು ಕ್ರಿಮಿನಲ್ ಕಾಯ್ದೆಯ ಮೂಲಭೂತ ನಿರ್ದೇಶಕ ಸೂತ್ರವಾಗಿದೆ. ಸಾವಿರ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬುದು ಈ ದೇಶದ ಪ್ರಜಾತಂತ್ರದ ನ್ಯಾಯಸಂಹಿತೆಯ ಮೂಲ ಸೂತ್ರವಾಗಿದೆ. ಆದರೆ, ಈವರೆಗೂ ಈ ‘ಶಂಕಿತ ಉಗ್ರ’ ರ ಪ್ರಕರಣದಲ್ಲಿ ಮಾತ್ರ ಈ ಬಗೆಯ ಯಾವುದೇ ನ್ಯಾಯ ಸಂಹಿತೆ ಅನ್ವಯವಾಗದಂತೆ ವಿಚಾರಣೆ ಮತ್ತು ತನಿಖೆಗೆ ಮುನ್ನವೇ ಮಾಧ್ಯಮಗಳ ಕೋರ್ಟಿನಲ್ಲಿ ತೀರ್ಪುಗಳು ಪ್ರಕಟವಾಗುತ್ತಿವೆ ಎಂದು ಟೀಕಿಸಿದ ರಾಜಶೇಖರ್, ನಮ್ಮ ಅತ್ಯಂತ ಭ್ರಷ್ಟ ರಾಜಕಾರಣಿಗಳು ಕೂಡಾ ನ್ಯಾಯಾಲಯ ತಮ್ಮನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಮಾನಿಸುವವರೆಗೂ ತಾವು ನಿರಪರಾಧಿಗಳು ಎಂದು ಹೇಳಿಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿರುವಾಗ, ಶಂಕಿತ ಉಗ್ರರಿಗೂ ಅದೇ ನ್ಯಾಯ ಸಂಹಿತೆ ಅನ್ವಯವಾಗಬೇಕೆಂದು ಪ್ರತಿಪಾದಿಸಿದರು.
ಈ ಹಿಂದೆ 2007-08 ರ ಚುನಾವಣೆಯ ಸಂದರ್ಭದಲ್ಲೂ ನೂರಾರು ಮುಸ್ಲೀಮರನ್ನು ಉಗ್ರರ ಹೆಸರಲ್ಲಿ ಹುಬ್ಬಳ್ಳಿ ಕೋರ್ಟ್ ಸ್ಪೋಟ, ಮಾಲೆಗಾಂವ್, ನಾಂದೇಡ್ ಬಾಂಬ್ ಬ್ಲಾಸ್ಟ್ ಇತ್ಯಾದಿ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಆಗಲೂ ಕೆಲವು ಮಾಧ್ಯಮಗಳು ಬಹಳ ವ್ಯವಸ್ಥಿತವಾಗಿ ಇಡೀ ಮುಸ್ಲೀಮ್ ಸಮುದಾಯದ ಮೇಲೆಯೇ ಚಾರ್ಜ್ ಶೀಟ್ ಹಾಕುವಂ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಿದವು. ಆದರೆ, ಆ ಎಲ್ಲಾ ಪ್ರಕರಣಗಳಲ್ಲೂ ಯಾವ ಮುಸ್ಲೀಮರೂ ಭಾಗವಹಿಸಿರಲಿಲ್ಲ ಎಂಬುದು ಬಳಿಕ ಸ್ಪಷ್ಟವಾಗಿ ಸಾಬೀತಾಯಿತು. ಪೋಲೀಸರ, ಕೋಮುವಾದಿ ಸರಕಾರದ, ಕೆಲವು ಮಾಧ್ಯಮಗಳ ಬೇಜವಬ್ದಾರಿ ಮತ್ತು ಸ್ಥಾಪಿತ ಹಿತಾಸಕ್ತಿಗಳಿಗೆ ಬಲಿಯಾಗಿ ನೂರಾರು ಮುಸ್ಲೀಮರು ವಿನಾಕಾರಣ ಅವಮಾನ ಮತ್ತು ಶಿಕ್ಷೆಯನ್ನು ಅನುಭವಿಸಿದರು. ಇಷ್ಟಾದ ಮೇಲೆಯೂ ಮೊದಲು ‘ಉಗ್ರರು’ ಎಂದು ಬರೆದ ಮಾದ್ಯಮಗಳು ಕನಿಷ್ಟ ಕ್ಷಮೆಯನ್ನೂ ಯಾಚಿಸಲಿಲ್ಲ ಎಂದು ರಾಜಶೇಖರ್ ಖೇದ ವ್ಯಕ್ತಪಡಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾದ ಡಾ.ಮುಹಮ್ಮದ್ ಹನೀಫ್ ಪ್ರಕರಣವನ್ನೂ, ರಾಷ್ಟ್ರ ಮಟ್ಟದಲ್ಲಿ ಪಾರ್ಲಿಮೆಂಟ್ ಪ್ರಕರಣವನ್ನು ರಾಜಶೇಖರ್ ಉದಾಹರಿಸಿದರು. ಭಯೋತ್ಪಾದನಾ ಪ್ರಕರಣದಡಿಯಲ್ಲಿ ಡಾ.ಹನೀಫ್ ರನ್ನು ಬಂಧಿಸಿದ ಆಸ್ಟ್ರೇಲಿಯಾ ಪೋಲಿಸರು, ಬಳಿಕ ನಿರಪರಾಧಿ ಎಂದು ಅವರನ್ನು ಬಿಡುಗಡೆಗೊಳಿಸಿತು. ಆಗ ಅಲ್ಲಿನ ಸರಕಾರ ಡಾ.ಹನೀಫ್ ರಿಗೆ ಹರಿಹಾರ ನೀಡಿತು. ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ಎಸ್.ಎ.ಆರ್.ಗಿಲಾನಿ ಹಾಗೂ ಇಫ್ತಿಕಾರ್ ಗಿಲಾನಿಯವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿತು ಎಂದು ರಾಜಶೇಖರ್ ನೆನಪು ಮಾಡಿಕೊಂಡರು.
ಪೋಲೀಸರು ಹಾಕುವ ಚಾರ್ಜ್ ಶೀಟ್ ಗಳನ್ನು ಕೋರ್ಟ್ ಗಳು ಖುಲಾಸೆಗೊಳಿಸಬಹುದು. ಆದರೆ, ಮಾಧ್ಯಮಗಳು ಹಾಕುವ ಚಾರ್ಜ್ ಶೀಟ್ ಗಳು ಜನಮಾನಸದಲ್ಲಿ ಉಳಿದು ಸಮಾಜದಲ್ಲಿ ಅಲ್ಪಸಂಖ್ಯಾತರ ಬದುಕನ್ನು ಅಸಹನೀಯಗೊಳಿಸುತ್ತದೆ. ಆದ್ದರಿಂದ, ಹಳೆಯ ಅನುಭವದ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಕರಣದ ವರದಿ ಮಾಡುವಾಗ ಆರೋಪಿಗಳು ನಿರಪರಾಧಿಗಳಾಗುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಾತ್ರವಲ್ಲ, ಕೆಲವು ವ್ಯಕ್ತಿಗಳು ಮಾಡಿರಬಹುದಾದ ತಪ್ಪಿಗೆ ಇಡೀ ಸಮುದಾಯದ ಮೇಲೆ ಹೇರುವ ಪ್ರಮಾದವನ್ನು ಮಾಡಬಾರದೆಂದು ವಿನಂತಿಸಿದರು.
ಆಯ್ದ ಮಾಹಿತಿಗಳನ್ನು ಸೋರಿಬಿಡದಂತೆ ಪೋಲೀಸರಿಗೆ ಕಟ್ಟುನಿಟ್ಟಿನ ಸೂಚನೆ
ನೀಡಬೇಕೆಂದೂ, ಕೋಮುವಾದಿ ಶಕ್ತಿಗಳ ಅಜೆಂಡಾಗಳಿಗೆ ಪೂರಕವಾಗಿ ಪ್ರಕರಣವು ಬಳಕೆಯಾಗದಂತೆ ನೋಡಿಕೊಳ್ಳಬೇಕೆಂದು ಪೋಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿದ ರಾಜಶೇಖರ್, ಈವರೆಗೆ ತನಗೆ ಹತ್ತಿದ್ದ ಎಲ್ಲಾ ಜನವಿರೋಧಿ ಕಳಂಕದಿಂದ ಮುಕ್ತವಾಗುವ ಹುನ್ನಾರದಲ್ಲಿ ರಾಜ್ಯದ ಬಿಜೆಪಿ ಸರಕಾರ ತೊಡಗಿದೆ ಎಂದು ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ, ಉಡುಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಖತೀಬ್ ಅಬ್ದುಲ್ ರಶೀದ್, ಲೂವಿಸ್ ಲೋಬೋ ಹಾಗೂ ಜತೆ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿ ಅವರ ಮುಖಕ್ಕೆ ಮಂಗಳೂರಿನಲ್ಲಿ ಬಜರಂಗ ದಳದ ಕಾರ್ಯಕರ್ತರು ಸೆಗಣಿ ಬಳಿದಿರುವುದನ್ನು ಖಂಡಿಸಿ ಮೇ. 1 ರಂದು ಸಂಜೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ಎಸ್ಪಿಯವರ ಮೂಲಕ ಪಶ್ಚಿಮ ವಲಯದ ಐಜಿಪಿಯವರಿಗೆ ಮನವಿ ಸಲ್ಲಿಸಿದರು. ಕೃತ್ಯಕ್ಕೆ ಕಾರಣನಾದ ಬಜರಂಗ ದಳದ ಶರಣ್ ಪಂಪ್ ವೆಲ್ ನನ್ನು ಬಂಧಿಸಿ ಗಡಿಪಾರು ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾದ್ಯಕ್ಷ ಮತ್ತು ಖ್ಯಾತ ಚಿಂತಕ ಜಿ.ರಾಜಶೇಖರ್ ಅವರು, ಪಟ್ಟಾಭಿಯವರ ಮೇಲೆ ದಾಳಿ, ಪಬ್ ದಾಳಿ, ಕೇರಳದ ಶಾಸಕರ ಮಗಳ ಮೇಲೆ ಹಲ್ಲೆ ಇತ್ಯಾದಿ ಹತ್ತು ಹಲವಾರು ಕೋಮುವಾದಿ ಹಿಂಸಾಕೃತ್ಯಗಳಲ್ಲಿ ಶಾಮೀಲಾಗಿರುವ ಶರಣ್ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿ, ಬಂಧಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪಟ್ಟಾಭಿಯವರು ಗೋಹತ್ಯೆಯನ್ನು ಸಮರ್ಥಿಸಿದ್ದಾರೆ ಎನ್ನುವುದು ಸುಳ್ಳು. ಅವರು ಗೋಹತ್ಯೆಯನ್ನು ಸಮರ್ಥಿಸಿಲ್ಲ. ಗೋಸಾಗಾಟಗಾರರ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸಿದ್ದಾರೆ. ಅದೇ ರೀತಿ ಪಟ್ಟಾಭಿಯವರು ನಕ್ಸಲರನ್ನು ಬೆಂಬಲಿಸುತ್ತಾರೆ ಎನ್ನುವುದೂ ಶುದ್ದಾಂಗ ಸುಳ್ಳು ಎಂದು ರಾಜಶೇಖರ್ ಸ್ಪಷ್ಟಪಡಿಸಿದರು.
ಸಂಘ ಪರಿವಾರ ಪ್ರಜಾಪ್ರಭುತ್ವ ದೇಶದಲ್ಲಿದ್ದುಕೊಂಡು, ಪ್ರಜಾಪ್ರಭುತ್ವದ ಎಲ್ಲಾ ಅವಕಾಶಗಳನ್ನೂ ಉಪಯೋಗಿಸಿಕೊಂಡು, ನಾಗರಿಕ ಸಮಾಜದ ಜೊತೆಗೆ ಇದ್ದುಕೊಂಡು
ಪ್ರಜಾತಂತ್ರಕ್ಕೆ ವಿರೋದವಾದ ಕೆಲಸಗಳನ್ನು ಮಾಡುತ್ತಿದೆ. ಪಟ್ಟಾಭಿಯವರ ಮೇಲೆ ನಡೆಸಿದ ದಾಳಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನ ಎಂದು ರಾಜಶೇಖರ್ ಹೇಳಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಅವರು ಮಾತನಾಡಿತ್ತಾ, ಪಟ್ಟಾಭಿಯವ ಮೇಲೆ ಆಕ್ರಮಣ ಮಾಡುವ ಮೂಲಕ ಬಜರಂಗ ದಳ ತಾನೊಂದು ಪಿಶಾಚಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು
ವ್ಯಂಗ್ಯವಾಡಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರೊ.ಕೆ.ಫಣಿರಾಜ್, ದಿನಕರ ಎಸ್.ಬೆಂಗ್ರೆ, ಡಾ.ಯು.ವನಜಾಕ್ಷಿ, ಹಯವದನ ಮೂಡುಸಗ್ರಿ, ಸಂವೃತ್ತ, ಮಂದೀಪ್ ಶೆಟ್ಟಿ, ಶ್ರೀಧರ ಭಟ್, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಪ್ರೊ.ಸಿರಿಲ್ ಮಥಾಯಸ್, ಖಾಸೀಂ ಬಾರ್ಕೂರು, ಖತೀಬ್ ಅಬ್ದುಲ್ ರಶೀದ್, ಚಾರ್ಲ್ಸ್ ಅಂಬ್ಲರ್, ಮುಹಮ್ಮದ್ ಮುಸ್ತಾಕ್, ಜಮಾ ಅತೆ ಇಸ್ಲಾಮಿ ಹಿಂದ್ ನ ಮುಹಮ್ಮದ್ ಇದ್ರೀಸ್, ಯೂತ್ ವಿಂಗ್ ನ ಹುಸೇನ್ ಕೋಡಿಬೆಂಗ್ರೆ, ದಲಿತ ಮಹಿಳಾ ಒಕ್ಕೂಟದ ಸುಂದರಿ ಪುತ್ತೂರು, ಸ್ವಾಭಿಮಾನಿ ಮಹಿಳಾ ವೇದಿಕೆಯ ಶಾರದಾ ಮೂಡುಸಗ್ರಿ ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.

ಉಡುಪಿ: ದಲಿತ ವಿರೋಧಿ, ರೈತ ವಿರೋಧಿ, ಜನ ವಿರೋಧಿ, ಭ್ರಷ್ಟಾಚಾರಿ, ನೈತಿಕ ದಿವಾಳಿತನದ ಕೋಮುವಾದಿ ಪಕ್ಷವಾದ ಬಿಜೆಪಿಯಿಂದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ 24 ಕೇಸುಗಳ ವೀರ ವಿ.ಸುನಿಲ್ ಕುಮಾರ್ ಅವರನ್ನು ಸೋಲಿಸಿ, ಜಾತ್ಯಾತೀತ ವ್ಯಕ್ತಿಗಳನ್ನು ಬೆಂಬಲಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಉಳಿಸಬೇಕೆಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತದಾರರಿಗೆ ಕರೆ ನೀಡಿದೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.10 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ವೇದಿಕೆ ಪರವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೊಕ್ ಅವರು, ಕ್ರೈಸ್ತರ ಹಾಗೂ ಮುಸ್ಲೀಮರ ಮತ ತನಗೆ ಅಗತ್ಯವಿಲ್ಲವೆಂದು ಬಹಿರಂಗ ಸಭೆಯಲ್ಲಿ ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಚುನಾವಣಾ ನೀತಿ ಸಂಹಿತೆ ಮತ್ತು ದೇಶದ ಸಂವಿಧಾನ ಹಾಗೂ ಜಾತ್ಯಾತೀತತೆಯ ತತ್ವವನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಗೋ ಸಾಗಾಟದ ನೆಪದಲ್ಲಿ ಹಾಜಬ್ಬ- ಹಸನಬ್ಬರನ್ನು ಬೆತ್ತಲೆ ಮಾಡಿದ ಪ್ರಕರಣ, ಕುಂದಾಪುರದ ಕರಾಣಿ ಮತೀನ್, ಬಾರ್ಕೂರಿನ ಕೃಷ್ಣಯ್ಯ ಪಾಟಾಳಿ ಹಾಗೂ ಆರ್ಡಿಯ ದಯಾನಂದ ಶೆಟ್ಟಿಯವರನ್ನು ಕೊಲೆ ಮಾಡಿದ ಪ್ರಕರಣಗಳಲ್ಲಿ, ಉಡುಪಿ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳಲ್ಲಿ ನಡೆದ ಕೋಮುಗಲಭೆಯ ಪ್ರಕರಣಗಳಲ್ಲಿ ಸುನಿಲ್ ಕುಮಾರ್ ಪಾತ್ರ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಇದೆ ಎಂದು ಕೋಮು ಸೌಹಾರ್ದ ವೇದಿಕೆ ಅಪಾದಿಸಿದೆ.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾದ್ಯಕ್ಷ ಜಿ.ರಾಜಶೇಖರ್, ದ.ಕ.ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲು, ರಾಜ್ಯ ಕಾರ್ಯದರ್ಶಿ ಮೂಡಿಗೆರೆಯ ಗೌಸ್ ಮೊಹಿದ್ದೀನ್, ಕೇಂದ್ರ ಸಮಿತಿ ಸದಸ್ಯರಾದ ಉದ್ಯಾವರ ಚರ್ಚ್ ನ ರೆ,ಫಾ.ವಿಲಿಯಂ ಮಾರ್ಟಿಸ್, ಕಲ್ಕುಳಿ ವಿಠಲ ಹೆಗಡೆ, ಪ್ರೊ.ನಗರಿ ಬಾಬಯ್ಯ, ಶಶಿಧರ ಹೆಮ್ಮಾಡಿ ಉಪಸ್ಥಿತರಿದ್ದರು.

ಉಡುಪಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜೀವ ನಗರ ನಿಟ್ಟೂರು ಶಾಖೆಯ ಉದ್ಘಾಟನಾ ಸಮಾರಂಭ ಮಾ.4 ರಂದು ಸಂಜೆ ಪುತ್ತೂರು ಕೊರಗ ಭವನದಲ್ಲಿ ನಡೆಯಿತು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ದೀಪ ಬೆಳಗಿಸಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಕರ್ನಾಟಕ ಜನಪರ ವೇದಿಕೆಯ ಸಂಚಾಲಕ ಶ್ರೀರಾಮ ದಿವಾಣ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ದಿನಕರ ಎಸ್.ಬೆಂಗ್ರೆ, ದಲಿತ ಮುಖಂಡರುಗಳಾದ ಗಣೇಶ್ ನೆರ್ಗಿ, ಯುವರಾಜ್ ಪುತ್ತೂರು ಅತಿಥಿಗಳಾಗಿ ಭಾಗವಹಿಸಿ ಸಂಘಟನೆಗೆ ಶುಭ ಹಾರೈಸಿದರು.
ವಾಸು ನೇಜಾರು, ಸುಂದರಿ ಪುತ್ತೂರು, ಕೃಷ್ಣ ಪುತ್ತೂರು ಹಾಗೂ ಸುರೇಶ್ ಉಪಸ್ಥಿತರಿದ್ದರು.

ಉಡುಪಿ: ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಿಷ ಸರ್ಪದ ಹಲ್ಲು ಮಾತ್ರವೇ ಆಗಿದ್ದ. ವಿಷ ಸರ್ಪ ಅಂದೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತೆ ಎಂದು ಚಿಂತಕ ವರದೇಶ ಹಿರೇಗಂಗೆ ಅವರು ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಎಂ.ಜಿ.ಎಂ. ಕಾಲೇಜಿನ ಧ್ವನ್ಯಾ ಲೋಕ ಸಭಾಂಗಣದಲ್ಲಿ ಜ.30 ರಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡುತ್ತಿದ್ದರು.
ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ಹೋಗಬೇಕೆಂಬ ವಿಷಯ ಗಾಂಧೀಜಿಯವರಲ್ಲಿ ಪ್ರಸ್ತಾಪವಾಯಿತು. ಆಗ ಗಾಂಧೀಜಿಯವರು ಶ್ರೀಕೃಷ್ಣ ದೇವಾಲಯಕ್ಕೆ ದಲಿತ ಸಮುದಾಯಕ್ಕೆ ಪ್ರವೇಶಿಸಿದರು. ದಲಿತರಿಗೆ ಪ್ರವೇಶ ಇಲ್ಲ ೆಂಬುದನ್ನು ತಿಳಿದುಕೊಂಡ ಬಳಿಕ ಗಾಂಧೀಜಿಯವರು ದೇವಾಲಯಕ್ಕೆ ಭೇಟಿ ಕೊಡದೆ ನಿರ್ಗಮಿಸಿದರು. ಇದು ಗಾಂಧಿ ಮಾರ್ಗ ಎಂದು ವರದೇಶ್ ತಿಳಿಸಿದರು.
ವೇದಿಕೆಯು ಗಾಂಧಿ ಜಯಂತಿ ಅಂಗವಾಗಿ, ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ‘ಜಾತಿ ಅಸ್ಪೃಶ್ಯತೆ ನಿವಾರಿಸಲು ಗಾಂಧಿವಾದದ ಪ್ರಸ್ತುತತೆ’ ಮತ್ತು ಪದವಿ ವಿದ್ಯಾರ್ಥಿಗಳಿಗೆ ಜಾಗತೀಕರಣದ ಮೊಬೈಲ್ ಯುಗದಲ್ಲಿ ಗಾಂಧಿ ಮಾರ್ಗದ ಪ್ರಸ್ತುತತೆಗಳು’ ಎಂಬ ವಿಷಯಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಹುಮಾನಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಗಾಂಧಿವಾದದ ಬಗ್ಗೆ ಮನೆ ಮನೆಗಳಲ್ಲಿ ಚರ್ಚೆ ನಡೆಯಬೇಕು, ನಾಲ್ಕು ಗೋಡೆಗಳ ನಡುವೆ ಮಾತನಾಡಿ ಏನೂ ಪ್ರಯೋಜನವಿಲ್ಲ ಎಂದರು.
ಸಾಮಾಜಿಕ ಅಸಮಾನತೆಯೇ ಈ ದೇಶದ ದೊಡ್ಡ ಸಮಸ್ಯೆ ಎಂದು ಹೇಳಿದ ಹೆಗ್ಡೆಯವರು, ಇಂದು ಖಾದಿಯನ್ನು ತೊಟ್ಟು ತಾನೊಬ್ಬ ಗಾಂಧಿವಾದಿ ಎಂದು ತೋರಿಸುವ ಕಪಟ ನಾಟಕಗಳು ಹೆಚ್ಚಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಪ್ರೊ.ಕೆ.ಪಣಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ದಿನಕರ ಬೆಂಗ್ರೆ ಸ್ವಾಗತಿಸಿದರು.

ಉಡುಪಿ: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಆಯೋಜಿಸಿದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮವು ಜ.30 ರಂದು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನ ಧ್ವನ್ಯಾ ಲೋಕ ಸಭಾಂಗಣದಲ್ಲಿ ನಡೆಯಿತು.
ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಬಹುಮಾನಗಳನ್ನು ವಿತರಿಸಿದರು. ಉಪನ್ಯಾಸಕರಾದ ವರದೇಶ ಹಿರೇಗಂಗೆ, ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ್, ಉಪಾಧ್ಯಕ್ಷರಾದ ಪ್ರೊ.ಕೆ.ಪಣಿರಾಜ್ ಹಾಗೂ ಕಾರ್ಯದರ್ಶಿ ದಿನಕರ ಬೆಂಗ್ರೆ ಉಪಸ್ಥಿತರಿತದ್ದರು.
ಬಹುಮಾನ ವಿಜೇತರ ವಿವರ:
ಪದವಿ ಪೂರ್ವ ವಿಭಾಗ- ಸಚಿನ್, ತೆಂಕ ನಿಡಿಯೂರು ಕಾಲೇಜು (ಪ್ರಥಮ), ರೋಶನ್ ರೋಕೋ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು (ದ್ವಿತಿಯ) ಮತ್ತು ಕು.ರಮ್ಶಿನ್, ಕಾಪು ವಿದ್ಯಾನಿಕೇತನ ಕಾಲೇಜು (ತೃತಿಯ).
ಪದವಿ ವಿಭಾಗ- ಆನಂದ ಹೆಗ್ಡೆ, ಪಿಪಿಸಿ, ಉಡುಪಿ (ಪ್ರಥಮ), ಹೇಮಲತಾ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ (ದ್ವಿತಿಯ) ಮತ್ತು ಶ್ರಧ್ಧಾ, ಎಂಪಿಎಂ ಕಾಲೇಜು, ಕಾರ್ಕಳ (ತೃತಿಯ).
ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಕೋಮು ಹಿಂಸೆ ನಿಯಂತ್ರಣ ಮಸೂದೆ ಅಲ್ಪ ಸಂಖ್ಯಾತರ ಪರವೂ ಇಲ್ಲ, ಬಹು ಸಂಖ್ಯಾತರ ವಿರುದ್ಧವೂ ಇಲ್ಲ, ಆದರೆ, ಈ ಮಸೂದೆಯನ್ನು ಜ್ಯಾರಿಗೊಳಿಸುವ ಇಚ್ಚಾ ಶಕ್ತಿಯೂ ಕೇಂದ್ರ ಸರಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ ಎಂದು ಖ್ಯಾತ ಕಥೆಗಾರ, ಲೇಖಕ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಹೇಳಿದರು.
ಉಡುಪಿಯ ಡಾನ್ ಬಾಸ್ಕೋ ಹಾಲ್ ನಲ್ಲಿ ಜ.15 ರಂದು ನಡೆದ ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ‘ಕೋಮು ಹಿಂಸೆ ನಿಯಂತ್ರಣ ಮಸೂದೆ’ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಅನ್ನೋದು ಹಿಂಸೆಯ ಭಾಗವಾಗಿಯೇ ಬಂದಿದೆ. ಹಿಂಸೆಯಲ್ಲಿ ಭಾಗಿಯಾದವರೇ ಜನಪ್ರತಿನಿಧಿಗಳಾಗುವಂತಹ ವ್ಯವಸ್ಥೆ ಇಂದು ಇದೇ ಎಂದು ಕಳವಳ ವ್ಯಕ್ತಪಡಿಸಿದ ಫಕೀರ್ ಮುಹಮ್ಮದ್ ಅವರು, ಕೇಂದ್ರದ ಕಾಂಗ್ರೆಸ್ ಸರಕಾರವೇ ತಯಾರು ಮಾಡಿದ ಕೋಮು ಹಿಂಸೆ ನಿಯಂತ್ರಣ ಮಸೂದೆಯಲ್ಲೇನಿದೆ ಎಂಬ ವಿಷಯ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
‘ಅಲ್ಪಸಂಖ್ಯಾತರ ಪೂಜಾ ಕೇಂದ್ರಗಳ ಮೇಲಿನ ದಾಳಿ ಎಂಬ ವಿಷಯದಲ್ಲಿ ಮಾತನಾಡಿದ ಚಿಕ್ಕ ಮಗಳೂರಿನ ವಕೀಲರೂ, ಮಾಜಿ ಜಿ.ಪಂ.ಉಪಾಧ್ಯಕ್ಷರೂ ಆದ ಪಿ.ಜೆ.ಆಂತೋನಿ ಅವರು, ಭಾವನೆಗಳನ್ನು ಕೆರಳಿಸುವ ಮೂಲಕ ಕೋಮು ಗಲಭೆ ಅಥವಾ ಇತರ ಎಲ್ಲಾ ರೀತಿಯ ಹಿಂಸೆಗಳನ್ನು ಮಾಡಲಾಗುತ್ತದೆ. ಜಾತ, ಮತ, ಧರ್ಮ, ಭಾಷೆ, ಪ್ರಾದೇಶಿಕತೆ ಇತ್ಯಾದಿಗಳಿಗೆ ಭಾವನೆಗಳನ್ನು ಕೆರಳಿಸುವ ಶಕ್ತಿ ಇದೇ ಎಂದು ತಿಳಿಸಿದರು.
ಮಸೂದೆ ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂಬ ರೀತಿಯಲ್ಲಿ ಭಾಸವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮಸೂದೆ ಮೂಲೆಯಲ್ಲಿ ಬಿದ್ದಿರುವ ಸಾಧ್ಯತೆಯೇ ಹೆಚ್ಚು ಎಂದು ಆಂತೋನಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾದ ಎಲ್.ಟಿ.ಶ್ರೀನಿವಾಸ ಬಾಬು ಅವರು, ಒಳ್ಳೆಯವರ ಮೌನದಿಂದಾಗಿಯೇ ಹತ್ತು ಶೇಕಡಾ ಜನರು ಶಾಂತಿ ಭಂಗ ಮಾಡಲು ಕಾರಣವೆಂದು ಹೇಳಿದರು. ಕಾನೂನು ಮತ್ತು ಸಂವಿಧಾನದ ಬಗ್ಗೆ ಮನೆ ಮನೆಗಳಲ್ಲಿ ಚರ್ಚೆಗಲಾಗಬೇಕು, ಪಟ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗಬೇಕು ಎಂದು ತಿಳಿಸಿದ ಶ್ರೀನಿವಾಸ ಬಾಬು ಅವರು, ಅಲ್ಪಸಂಖ್ಯಾತರನ್ನು, ದಲಿತರನ್ನು, ಅಸಂಘಟಿತ ಕಾರ್ಮೀಕರನ್ನು, ಪೌರ ಕಾರ್ಮೀಕರನ್ನು ರಕ್ಷಿಸುವುದು ಸರಕಾರದ ಕರ್ತವ್ಯ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಎಂ.ಎಫ್.ಸಲ್ದಾನ ಅವರು ಇಂಗ್ಲೀಷ್ ನಲ್ಲಿ ಬರೆದು, ಸುರೇಶ್ ಭಟ್ ಕನ್ನಡಕ್ಕೆ ಅನುವಾದಿಸಿದ ‘ಸರಕಾರದಿಂದ ಭಯೋತ್ಪಾದನೆ-ಪ್ರಜಾ ಪೀಡನೆ’, ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ‘ಕೋಮು ಹಿಂಸೆ ನಿಯಂತ್ರಣ ಮಸೂದೆ ಯಾಕೆ ಬೇಕು ?’ ಮತ್ತು ಲಡಾಯಿ ಪ್ರಕಾಶನ ಪ್ರಕಟಿಸಿದ ಕೋಮು ಹಿಂಸೆ ನಿಯಂತ್ರಣ ಮಸೂದೆ- 2011′ ಎಂಬ ಮೂರು ಪುಸ್ತಕಗಳನ್ನು ಶ್ರೀನಿವಾಸ ಬಾಬು ಬಿಡುಗಡೆಗೊಳಿಸಿದರು.
ಜಸ್ಟೀಸ್ ಎಂ.ಎಫ್.ಸಲ್ದಾನ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ವೇದಿಕೆಯ ಉಡುಪಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾದ ಗೋಪಾಲ ಬಿ.ಶೆಟ್ಟಿ ಹಾಗೂ ದ.ಕ.ಜಿಲ್ಲಾಧ್ಯಕ್ಷರಾದ ಸುರೇಶ್ ಭಟ್ ಬಾಕ್ರಬೈಲ್ ಉಪಸ್ಥಿತರಿದ್ದರು.
ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ದಿನಕರ ಬೆಂಗ್ರೆ ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತರ್ ರಾಷ್ಟ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಲೂವಿಸ್ ಲೋಬೋ ವಂದಿಸಿದರು.

ಉಡುಪಿ: ಬಿಜಾಪುರ ಜಿಲ್ಲೆಯ ಸಿಂಧಗಿಯ ತಹಶೀಲ್ದಾರ್ ಕಚೇರಿಯ ಧ್ವಜಸ್ಥಂಭದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪಿಗಳನ್ನು ಸಿಂಧಗಿ ಪೊಲೀಸರು ಪತ್ತೆ ಹಚ್ಚಲು ಯಶಿಸ್ವಿಯಾಗಿದ್ದು, ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಸಿ.ರಾಜಪ್ಪ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತರಾದ ಎಲ್ಲಾ ಏಳು ಮಂದಿ ಆರೋಪಿಗಳೂ ಪ್ರಮೋದ ಮುತಾಲಿಕ್ ನಾಯಕತ್ವದ ಶ್ರೀರಾಮ ಸೇನೆಯ ಕಾರ್ಯಕರ್ತರು ಎಂದೂ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ್ದಾರೆ ಎಂದು, ಇದನ್ನು ಅಲ್ಪ ಸಂಖ್ಯಾತರ ತಲೆ ಮೇಲೆ ಕಟ್ಟಿ ಸಂಘ ಪರಿವಾರದ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಮಾತ್ರವಲ್ಲ ಬಂದ್ ಸಹ ನಡೆಸಿದ್ದರು. ಈ ಪ್ರಕರಣವನ್ನು ಬಿಜೆಪಿ ಓಟು ಬ್ಯಾಂಕ್ ಗೆ ಉಪಯೋಗಿಸಲು ಸಂಘಟನೆಗಳು ಪ್ರಯತ್ನ ನಡೆಸಿತ್ತು.

ಉಡುಪಿ: ಕೊಡವೂರು ಗ್ರಾಮದ ಪಳ್ಳಿಜಿಡ್ದದಲ್ಲಿರುವ ಕಲ್ಮತ್ ಜಾಮಿಯ ಮಸೀದಿಗೆ ಮತ ಪ್ರವಚನ ನೀಡಲು ಬಂದ ಧಾರ್ಮೀಕ ವಿದ್ವಾಂಸರನ್ನು ಭಯೋತ್ಪಾದಕರು ಎಂದು ಅಪಪ್ರಚಾರ ಮಾಡಿದ್ದೂ ಅಲ್ಲದೆ, ಶುಕ್ರವಾರದ ನಮಾಜ್ ಗೆ ಅಡ್ಡಿ ಪಡಿಸಿದ ಸಂಘ ಪರಿವಾರದ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಮತ್ತೆ ಹಿಂದಿನಂತೆ ನಮಾಜ್ ಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಡಿ.31 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ವಿ.ಎಸ್.ಆಚಾರ್ಯ ಹಾಗೂ ಜಿಲ್ಲಾಡಳಿತಕ್ಕೆ ನಿಯೋಗವೊಂದು ಮನವಿ ಸಲ್ಲಿಸಿತು.
ಬೆಳಗ್ಗೆ ಸಚಿವ ಆಚಾರ್ಯ ಹಾಗೂ ಸಂಜೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಸಚಿವರಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ಖತೀಬ್ ಅಬ್ದುಲ್ ರಶೀದ್, ಬುಡನ್ ಭಾಷಾ ಮುಂತಾದವರು ಇದ್ದರು. ಜಿಲ್ಲಾಡಳಿತಕ್ಕೆ ಮನವಿ ನೀಡಿದ ನಿಯೋಗದಲ್ಲಿ ಉಡುಪಿ ಜಿಲ್ಲಾ ಅಲ್ಪ ಸಂಖ್ಯಾತರ ವೇದಿಕೆಯ ಅಧ್ಯಕ್ಷರಾದ ಸಿರಿಲ್ ಮಥಾಯಸ್, ಖಾಸೀಮ್ ಬಾರ್ಕೂರು, ಖತೀಬ್ ಅಬ್ದುಲ್ ರಶೀದ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ್, ಉಪಾಧ್ಯಕ್ಷರುಗಳಾದ ಪ್ರೊ.ಕೆ.ಪಣಿರಾಜ್, ಪ್ರೊ.ಹಯವದನ ಮೂಡುಸಗ್ರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಜಯನ್ ಮಲ್ಪೆ ಮೊದಲಾದವರು ಇದ್ದರು.
ಸುರತ್ಕಲ್ ಸಮೀಪದ ಹಳೆಯಂಗಡಿಯ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ದಾಳಿ ನಡೆಸಿದ ಬಜರಂಗ ದಳದ ಕಾರ್ಯಕರ್ತರ ಕೃತ್ಯವನ್ನೂ ಖಂಡಿಸಿರುವ ನಿಯೋಗವು, ಆರೋಪಯಾಗಳನ್ನು ಕೂಡಲೇ ಬಂಧಿಸಬೇಕು ಮತ್ತು ಅಲ್ಪ ಸಂಖ್ಯಾತ ಸಮುದಾಯಕ್ಕೆ ಹಾಗು ಪ್ರಾಥನಾ ಮಂದಿರಗಳಿಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿತು.