Posts Tagged ‘jds’

ಉಡುಪಿ: ಇಡೀ ಉಡುಪಿ ಜಿಲ್ಲೆಯ ವಿರೋಧ ಪಕ್ಷಗಳ ಪ್ರತಿನಿಧಿಯಾಗಿ ಸದನದಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಯ ವಿ.ಸುನಿಲ್ ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಇದೇ ಕೆಲಸವನ್ನು ಕಳೆದ ಬಾರಿ ಕಾರ್ಕಳ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಎಚ್.ಗೋಪಾಲ ಭಂಡಾರಿಯವರ ಹೆಗಲಿಗೆ ಹಾಕಿದ್ದರು.
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಐದರ ಪೈಕಿ ನಾಲ್ಕರಲ್ಲಿ ಕಳೆದ ಆಡಳಿತಾವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರೆ, ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದರು. ಕಾರ್ಕಳದಲ್ಲಿ ಕಾಂಗ್ರೆಸ್ ನ ಗೋಪಾಲ ಭಂಡಾರಿ ಜಯ ಸಾಧಿಸಿದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಈ ಸಲ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದು, ಕಾರ್ಕಳದಲ್ಲಿ ವಿರೋಧಿ ಬಿಜೆಪಿ ಅಭ್ಯರ್ಥಿ ವಿಜಯಿಯಾಗಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕಿಶೋರ್ ಕುಮಾರ್ ಹಾಗೂ ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ವಸಂತ ವಿ.ಸಾಲಿಯಾನ್ ಸಹಿತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್, ಬಿಎಸ್ಪಿ, ಎಸ್ ಡಿಪಿಐ, ಬಿಎಸ್ಪಿ, ಜೆಡಿಯು, ಸಿಪಿಐಎಂ ಪಕ್ಷಗಳ ಮತ್ತು ಪಕ್ಷೇತರರು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಾಗಲೀ, ಬಿಜೆಪಿಗಾಗಲೀ ಇತರರ ಸ್ಪರ್ಧೆಯಿಂದಾಗಿ ಸೋಲುಂಟಾಗಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್, ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ, ಕುಂದಾಪುರದಲ್ಲಿ ಪಕ್ಷೇತರ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಪುವಿನಲ್ಲಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಹಾಗೂ ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳ ಎದುರು ನೇರವಾಗಿ ಪ್ರತಿಸ್ಪರ್ಧೆ ನೀಡಿ ಸೋಲುಂಡ ಅಭ್ಯರ್ಥಿಗಳಿಗೆ ಸೋಲಿಗೆ ಮೂರನೇ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯೇ ಕಾರಣ ಅಲ್ಲದಿರುವುದು ಈ ಸಲದ ವಿಶೇಷಗಳಲ್ಲಿ ಒಂದು. ಕಾಪುವಿನಲ್ಲಿ ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ವಸಂತ ಸಾಲಿಯಾನ್ ಹಾಗೂ ಎಸ್ ಡಿಪಿಐನ ಅಬ್ದುಲ್ ಹಕೀಂ ಇವರ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಸೋಲಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಈ ಅಂದಾಜು ಸುಳ್ಳಾಗಿದೆ. ಸಾಲ್ಯಾನ್ 4,327 ಮತ್ತು ಅಬ್ದುಲ್ ಹಕೀಂ 2,171 ಮತಗಳನ್ನು ಪಡೆದಿದ್ದಾರೆ. ಆದರೂ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಸೋಲಲಿಲ್ಲ. ಬದಲಾಗಿ 1,855 ಮತಗಳ ಅಂತರದಿಂದ ಗೆದ್ದಿದ್ದಾರೆ.
ಉಡುಪಿಯಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಸ್ಪರ್ಧಿಸಿದ ಬಿಎಸ್ಪಿಯ ವಿ.ಮಂಜುನಾಥ್ ಪಡೆದ ಮತ ಕೇವಲ 986. ದಸಂಸದ ಮೂರು ಬಣಗಳು, ಸಮತಾ ಸೈನಿಕ ದಳ ಮಂಜುನಾಥರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಸಂಘಟನೆಗಳಿಗೆ ಸೇರಿದ ಸದಸ್ಯರ, ಕುಟುಂಬದವರ ಮತಗಳು ಮತ್ತು ಎಸ್ ಡಿಪಿಐ ಸದಸ್ಯರ ಹಾಗೂ ಇವರ ಕುಟುಂಬದವರ ಮತಗಳೇ ಬಿಎಸ್ಪಿ ಅಭ್ಯರ್ಥಿಗೆ ಲಭಿಸಿಲ್ಲ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗುವ ಅಂಶ.

ಉಡುಪಿ: ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)- 86,868, ಬಿ.ಸುಧಾಕರ ಶೆಟ್ಟಿ (ಬಿಜೆಪಿ)- 47,344, ಅಲೆವೂರು ಯೋಗೀಶ್ ಆಚಾರ್ಯ (ಪಕ್ಷೇತರ)- 1,472, ಬಾರಕೂರು ಸತೀಶ್ ಪೂಜಾರಿ (ಜೆಡಿಎಸ್)- 1,017, ವಿ.ಮಂಜುನಾಥ್ (ಬಿಎಸ್ಪಿ)- 986, ತುಕರಾಮ ಕೋಟ್ಯಾನ್ (ಪಕ್ಷೇತರ)- 498 ಮತ್ತು ನಾಸಿರ್ ಹುಸೇನ್ (ಪಕ್ಷೇತರ)- 245.
ಕಾಪು: ವಿನಯ ಕುಮಾರ್ ಸೊರಕೆ (ಕಾಂಗ್ರೆಸ್)- 52,782, ಲಾಲಾಜಿ ಆರ್.ಮೆಂಡನ್ (ಬಿಜೆಪಿ)- 50,927, ವಸಂತ ವಿ. ಸಾಲಿಯಾನ್ (ಜೆಡಿಎಸ್)- 4,327, ಅಬ್ದುಲ್ ಹಕೀಂ (ಎಸ್ಡಿಪಿಐ)- 2,171, ಶ್ರೀಕಾಂತ್ ಬಿ.ಆಚಾರ್ಯ (ಪಕ್ಷೇತರ)- 1,174, ಹಮೀದ್ (ಪಕ್ಷೇತರ)- 1,174, ವಿಜಯ ಕುಮಾರ್ ಹೆಗ್ಡೆ (ಪಕ್ಷೇತರ)- 467, ರೊನಾಲ್ಡ್ ಕ್ಯಾಸ್ಟಲಿನೊ (ಪಕ್ಷೇತರ)- 269, ಸ್ಟೀಫನ್ ರಿಚರ್ಡ್ ಲೋಬೊ (ಪಕ್ಷೇತರ)- 249, ಖಾಸೀಮ್ (ಪಕ್ಷೇತರ)- 208 ಮತ್ತು ಪ್ರವೀಣ್ ಕುಮಾರ್ (ಪಕ್ಷೇತರ)- 162.
ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ)- 80,563, ಮಲ್ಯಾಡಿ ಶಿವರಾಮ ಶೆಟ್ಟಿ (ಕಾಂಗ್ರೆಸ್)- 39,952, ಕಿಶೋರ್ ಕುಮಾರ್ (ಬಿಜೆಪಿ)- 14,524, ಶ್ರೀನಿವಾಸ ಎಚ್. (ಪಕ್ಷೇತರ)- 2,442, ಮಂಜುನಾಥ್ (ಪಕ್ಷೇತರ)- 764 ಮತ್ತು ಕೃಷ್ಣ ಭರತ್ ಕಲ್ (ಜೆಡಿಯು)- 738.
ಬೈಂದೂರು: ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್)- 82,277, ಬಿ.ಎಂ.ಸುಕುಮಾರ ಶೆಟ್ಟಿ (ಬಿಜೆಪಿ)- 51,128, ನವೀನಚಂದ್ರ ಖಾರ್ವಿ ಉಪ್ಪುಂದ (ಕೆಜೆಪಿ)- 4,177, ಕೆ.ಶಂಕರ್ (ಸಿಪಿಐಎಂ)- 2,960, ಎಚ್.ಸುರೇಶ್ ಪೂಜಾರಿ (ಪಕ್ಷೇತರ)- 1,611, ಉದಯ ಕುಮಾರ್ ತಲ್ಲೂರು (ಬಿಎಸ್ಪಿ)- 1,515, ಸುರಯ್ಯಾ ಭಾನು (ಜೆಡಿಎಸ್)- 1,023, ಶ್ರೀಧರ ಪೇದೆಮನೆ (ಪಕ್ಷೇತರ)- 957, ಲೋಕೇಶ್ ವಿಠಲ್ ಬೋರ್ಕರ್ (ಪಕ್ಷೇತರ)- 630, ದಿವಾಕರ ಕೋಟ್ಯಾನ್ (ಪಕ್ಷೇತರ)- 620, ಅಬ್ದುಲ್ ಅಝೀಝ್ (ಪಕ್ಷೇತರ)- 463, ಅಬ್ದುಲ್ ಹಜೀದ್ (ಪಕ್ಷೇತರ)- 395 ಮತ್ತು ಮಂಜುನಾಥ್ ಕೆ. (ಜೆಡಿಯು)- 334.
ಕಾರ್ಕಳ: ವಿ.ಸುನಿಲ್ ಕುಮಾರ್ (ಬಿಜೆಪಿ)- 65,039, ಎಚ್.ಗೋಪಾಲ ಭಂಡಾರಿ
(ಕಾಂಗ್ರೆಸ್)- 60,785, ವಾಲ್ಟರ್ ಡಿಸೋಜ (ಜೆಡಿಎಸ್)- 1,302, ಸುನಿಲ್ ಸೋನ್ಸ್ (ಬಿಎಸ್ಪಿ)- 878, ಯು.ಕೆ.ಸಯ್ಯದ್ (ಪಕ್ಷೇತರ)- 873, ಪ್ರವೀಣ್ ಪೂಜಾರಿ (ಕೆಜೆಪಿ)- 553, ಕೆ.ಪಿ.ಪದ್ಮಾವತಿ (ಪಕ್ಷೇತರ)- 478, ರಿಯಾಝ್ (ಪಕ್ಷೇತರ)- 334 ಮತ್ತು ಗೋಪಾಲ (ಪಕ್ಷೇತರ)- 232.
ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂತರ: 40,611. ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ವಿನಯ ಕುಮಾರ್ ಸೊರಕೆ. ಅಂತರ: 1,855. ಅತೀ ಕಡಿಮೆ ಮತ ಪಡೆದ ಅಭ್ಯರ್ಥಿ: ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರವೀಣ್ ಕುಮಾರ್. ಪಡೆದ ಮತ: 162.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾರಕೂರು ಸತೀಶ್ ಪೂಜಾರಿ ಮೇಲೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿ ಮೇ 3 ರಂದು ರಾತ್ರಿ ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ಆಕ್ರಮಣದಿಂದ ಗಂಭೀರವಾಗಿ ಗಾಯಗೊಂಡಿರುವ ಸತೀಶ್ ಪೂಜಾರಿ ಅವರನ್ನು ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಯಿತು. ಈ ಬಗ್ಗೆ ಸತೀಶ್ ಪೂಜಾರಿ ನೀಡಿದ ದೂರಿನ ಆಧಾರದಲ್ಲಿ ಮಲ್ಪೆ ಠಾಣೆಯ ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ಸತೀಶ್ ಪೂಜಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕ್ಷೇತ್ರದಾದ್ಯಂತ ವ್ಯಾಪಕ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದರು. ಸತೀಶ್ ಪೂಜಾರಿಯವರ ಸ್ಪರ್ಧೆ ಕಾಂಗ್ರೆಸ್ ಗೆ ಬಹುದೊಡ್ಡ ಹೊಡೆತ ನೀಡಬಹುದು ಎಂದೂ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಶುಕ್ರವಾರ ರಾತ್ರಿ ಕಲ್ಮಾಡಿಯಲ್ಲಿ ನಿಂತಿದ್ದ ಸತೀಶ್ ಪೂಜಾರಿ ಮೇಲೆ ದಾಳಿ ನಡೆಸಿದವರು, ‘ಭಾರೀ ಕ್ಯಾನ್ವಾಸ್ ಮಾಡ್ತಿಯ ?’ ಎಂದು ಕೇಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಂದು ಮಧ್ಯಾಹ್ನ ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೆ.ರಘುಪತಿ ಭಟ್ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿಧಾಕರ ಶೆಟ್ಟಿ ಅವರು ಗಾಯಾಳು ಸತೀಶ್ ಪೂಜಾರಿಯವರ ಆರೋಗ್ಯ ವಿಚಾರಿಸಿ, ಸಾಂತ್ವನ ನೀಡಿದರು. ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಕಳೆದ ಕೆಲವು ಸಮಯಗಳಿಂದ ಪ್ರತಿಪಕ್ಷಗಳ ಪ್ರತಿಸ್ಪರ್ಧಿಗಳನ್ನು ರಾಜಕೀಯವಾಗಿ ಮತ್ತು ವಯುಕ್ತಿಕವಾಗಿ ಮುಗಿಸುವ ಹಾಗೂ ಚಾರಿತ್ರ್ಯಹರಣ ಮಾಡುವ ಕೆಲಸ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಸತೀಶ್ ಪೂಜಾರಿ ಮೇಲೆ ನಡೆದ ಹಲ್ಲೆ ಇದರ ಮುಂದುವರಿದ ಭಾಗವಷ್ಟೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲದೆ ಮತ್ತೇನೂ ಅಲ್ಲ. ಹಲ್ಲೆ ಕೃತ್ಯದ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಿ ಶಿಕ್ಷಿಸಬೇಕು ಎಂದು ಶಾಸಕ ರಘುಪತಿ ಭಟ್ ಹಾಗೂ ಬಿಜೆಪಿ ಅಭ್ಯರ್ಥಿ ಸುಧಾಕರ ಶೆಟ್ಟಿ ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪೂಜಾರಿಯವರಿಗೆ ಸಾಂತ್ವನ ಹೇಳಿ, ಘಟನೆಯನ್ನು ಖಂಡಿಸಿದ ಮಾಜಿ ಸಚಿವ, ಕಾಪು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ಸಾಲ್ಯಾನ್ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಸತೀಶ್ ಪೂಜಾರಿಯವರ ಜನಪ್ರಿಯತೆಯನ್ನು ಸಹಿಸದೆ ವಿರೋಧ ಪಕ್ಷಗಳು ನಡೆಸಿದ ಕೃತ್ಯವಿದು ಎಂದು ಆರೋಪಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗಿನ್ನು ಉಳಿದಿರುವುದು ಕೇವಲ ಇನ್ನೊಂದು ದಿನ. ಬಹು ವರ್ಷ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಅಲ್ಪ ಸಮಯ ಆಡಳಿತ ನಡೆಸಿದ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಒಲಿಸುವ ಅಂತಿಮ ಹಂತದ ಭ್ರಷ್ಟ ರಾಜಕೀಯದಲ್ಲಿ
ನಿರತರಾವಾಗಿವೆ.
ನಿಜಕ್ಕೂ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ, ಈ ಪಕ್ಷಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳಿಗೆ ಜನಪ್ರತಿಧಿಗಳಾಗುವ, ಆಡಳಿತ ನಡೆಸುವ ಅರ್ಹತೆ, ಯೋಗ್ಯತೆ ಏನಾದರೂ ಇದೆಯೇ ? ಕನಿಷ್ಟ ಅರ್ಹತೆಯಾಗಲೀ, ಯೋಗ್ಯತೆಯಾಗಲೀ ಇವರಿಗೆ ಖಂಡಿತಾ ಇಲ್ಲ. ಜೈಲಿನಲ್ಲಿರಬೇಕಾದವರು ಸದನದಲ್ಲಿದ್ದಾರೆ ಅಥವಾ ಸದನ ಪ್ರವೇಶಿಸುವ
ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಮತ್ತೆ ಮತದಾರರ ಕಾಲಬುಡಕ್ಕೆ, ಮನೆಗಳಿಗೆ ಎಡತಾಕುತ್ತಿದ್ದಾರೆ. ಇವರನ್ನು ಪ್ರಶ್ನಿಸದಿರುವ, ಮತ್ತೆ ಇವೇ ಎರಡು ಪಕ್ಷಗಳತ್ತಲೇ ನೋಡುತ್ತಿರುವ ಮತದಾರರಿಗಾದರೂ ಏನಾಗಿದೆ ? ಯಾಕೆ ಮತದಾರರು ಪ್ರಬುದ್ಧರಾಗುತ್ತಿಲ್ಲ ? ಪ್ರಜ್ಞಾವಂತರಾಗುತ್ತಿಲ್ಲ ?
ಇದುವರೆಗೆ ದೇಶದ, ರಾಜ್ಯದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಮಂತ್ರ ಜಪಿಸಿದ ಈ ಎರಡೂ ಪಕ್ಷಗಳು, ಇವುಗಳನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಮತ್ತು ಈಗ ಮತ್ತೆ ಜನಪ್ರತಿನಿಧಿಗಳಾಗುವ ಹಂಬಲದಲ್ಲಿರುವ ಅಭ್ಯರ್ಥಿಗಳಿಗೆ ಮತದಾರರು ಮತ್ತೆ ಮತ್ತೆ ಮತ ಹಾಕುತ್ತಾರೆಂದಾದರೆ, ಇದು ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತೆಯೇ ಅಲ್ಲವೇ ? ಮುಖ್ಯವಾಗಿ ಈ ಎರಡೂ ಪಕ್ಷಗಳು, ಆಡಳಿತ ನಡೆಸುವ ತನ್ನೆಲ್ಲಾ ಯೋಗ್ಯತೆ, ಅರ್ಹತೆಗಳನ್ನೂ ಅದಾವಾಗಲೇ ಕಳೆದುಕೊಂಡಿವೆ. ವಾಸ್ತವಕ್ಕಾದರೆ, ಚುನಾವಣಾ ಆಯೋಗವೇ ಈ ಪಕ್ಷಗಳನ್ನು ಅನರ್ಹಗೊಳಿಸಬೇಕು. ಆದರೆ, ಆಯೋಗ ಹಾಗೆ ಮಾಡಲಾರದು. ಅಷ್ಟು ದಿಟ್ಟತನವಾಗಲೀ, ದಕ್ಷತೆಯಾಗಲಿ, ಪ್ರಾಮಾಣಿಕತೆಯಾಗಲಿ ಅದಕ್ಕಿಲ್ಲ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕಾಗಿ ರೂಪುಗೊಂಡ ಸಂಘಟನೆ. ಅದನ್ನಿನ್ನೂ ವಿಸರ್ಜನೆ ಮಾಡದಿರುವುದೇ ದೊಡ್ಡ ತಪ್ಪು. ಬಿಜೆಪಿ ನಮ್ಮ ಸಂವಿಧಾನದ ಆಶಯಗಳಿಗೇ ವಿರೋಧವಾಗಿರುವ ಪಕ್ಷ. ಇಂಥ ಪಕ್ಷವನ್ನು ರಚಿಸುವುದಕ್ಕೆ ಇಲ್ಲಿ ಅವಕಾಶ ಕೊಡಬಾರದಿತ್ತು.
ಸ್ವಾತಂತ್ರ್ಯ ಸಿಕ್ಕಿ 66 ವರ್ಷಗಳೇ ಆದರೂ ಇನ್ನೂ ಸಹ ಬಡವರ ಸಂಖ್ಯೆ ಕಡಿಮೆಯಾಗಿಲ್ಲ. ನಿರುದ್ಯೋಗ ಸಮಸ್ಯೆಗೆ ಹರಿಹಾರವಾಗಿಲ್ಲ. ಕನಿಷ್ಟ ಶುದ್ಧ ಕುಡಿಯುವ ನೀರು, 24 ಗಂಟೆ ವಿದ್ಯುತ್, ಸುವ್ಯವಸ್ಥಿತ ರಸ್ತೆ, ಸೇತುವೆ, ಒಳ ಚರಂಡಿ, ಭೂಮಿ, ಮನೆ ಇತ್ಯಾದಿಗಳನ್ನು ಒದಗಿಸಲು ಸರಕಾರಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ, ಇದು ಮಹಾ ದುರಂತವಲ್ಲದೆ ಮತ್ತೇನು ?
ಪ್ರಜೆಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗದ, ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ಆಯ್ಕೆಯಾದ ಪ್ರಜೆಗಳೇ ಪ್ರಭುಗಳಾಗಿರುವ ಪಕ್ಷಗಳ ಸರಕಾರಗಳು ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದಾದರೂ ಏನು ? ಸಾಧಿಸಿದ್ದೇನು ಕರ್ಮವಾ ? ಮತ್ತೆ ಈಗಲೂ ನಮ್ಮ ಈ ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಗಳು ಕಸದ ಬುಟ್ಟಿಗೆ ಎಸೆಯಬಹುದಾದಂಥ ಕರಪತ್ರವನ್ನಷ್ಟೇ ಪ್ರಕಟಿಸುವ ಮೂಲಕ ಮತದಾರರನ್ನು ಪುನರಪಿ ಮೂರ್ಖರನ್ನಾಗಿಸುತ್ತಿದೆ ಎಂದರೆ, ಈ ಪಕ್ಷಗಳನ್ನು ಕ್ಷಮಿಸಬೇಕೇ ?
ಸರಕಾರದ ಹಣವೆಂದರೆ, ಅದು ಜನರ ಹಣ. ವಿವಿಧ ತೆರಿಗೆಗಳ ರೂಪದಲ್ಲಿ ಜನರಿಂದ
ಸಂಗ್ರಹಿಸಲ್ಪಟ್ಟ ಹಣದಿಂದಲೇ ಸರಕಾರಗಳು ಹೊಸ ಹೊಸ ಹೆಸರಿನಲ್ಲಿ ಯೋಜನೆಗಳನ್ನು ಜ್ಯಾರಿಗೊಳಿಸುವುದು. ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಇದೇ ಹಣವನ್ನು ತಂದು ಅಭಿವೃದ್ಧಿಯ ಹೆಸರಿನಲ್ಲಿ ಅಗಲವಾದ ರಸ್ತೆಗಳನ್ನು ನಿರ್ಮಿಸುವುದು. ಹೀಗೆ ಮಂಜೂರಾಗುವ ಹಣದಲ್ಲಿಯೇ ತಾನೇ ಕಮಿಷನ್ ಹೊಡೆದು ಉದ್ಯಮಗಳನ್ನು ಸ್ಥಾಪಿಸಿ ಕೊಟ್ಯಧಿಪತಿಯಾಗುವುದು ?
ಕಾಮಗಾರಿ ಮಾಡುವುದೂ ಜನರ ಹಣದಿಂದಲೇ. 66 ವರ್ಷಗಳಿಂದಲೂ ಅದೇ ಕಾಮಗಾರಿಗಳು. ರಸ್ತೆ, ನೀರು, ವಿದ್ಯುತ್, ಒಳಚರಂಡಿ, ಸೇತುವೆ. ಇಂಥ ಅಭಿವೃದ್ಧಿ ಕಾಮಗಾರಿಗಳನ್ನೇ ಇನ್ನೂ ಮಾಡಲಾಗುತ್ತಿದೆ ಎಂದರೆ, ಇನ್ನುಳಿದ ದೂರದೃಷ್ಟಿಯ ಕಾಮಗಾರಿಗಳನ್ನು ಅನುಷ್ಟಾನ ಮಾಡುವುದು ಯಾವಾಗ ? ಇದೇ ಹಣದಿಂದ ಇವರ ಸ್ವ ಅಭಿವೃದ್ಧಿ. ಅದಕ್ಕಾಗಿ ಇವರು ಮತ್ತೆ ಮತ್ತೆ ಜನಪ್ರತಿಧಿಗಳಾಗಬೇಕು, ಮತದಾರರು ತಮ್ಮ ಹಕ್ಕಿನ ಮತದಾನ ಮಾಡಬೇಕು ! ಜನಪ್ರತಿನಿಧಿ ಎನ್ನುವುದೇ ಇಂದು ಭಾರೀ ದೊಡ್ಡ ಉದ್ಯಮವಾಗಿದೆ. ಇಂಥ ಉದ್ಯಮಿಗಳದ್ದೇ ಆಗಿರುವ ಪಕ್ಷಗಳು ಸಹಜವಾಗಿಯೇ ಮತ್ತೆ ಉದ್ಯಮಿಗಳಿನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ನಾಯಿ ಬಾಲ ಎಂದಿಂದರೂ ಡೊಂಕು ಎನ್ನುವುದನ್ನು ತೋರಿಸಿಕೊಟ್ಟಿದೆ. ಆದರೆ, ಈ ಸತ್ಯ ಗೊತ್ತಿದ್ದರೂ ಮತದಾರ ಪ್ರಭು ಮಾತ್ರ ಯಾಕಿನ್ನೂ ಈ ಉದ್ಯಮಿಗಳನ್ನೇ
ನೆಚ್ಚಿಕೊಂಡಿದ್ದಾನೆ, ಎನ್ನುವುದೇ ಅರ್ಥವಾಗದ ಯಕ್ಷ ಪ್ರಶ್ನೆ.
ಭೂಮಿ ಇಲ್ಲದವರಿಗೆ ಒಂದು ತುಂಡು ಭೂಮಿ, ಸೂರಿಲ್ಲದವರಿಗೆ ಸೂರು, ನಿರುದ್ಯೋಗ ಸಮಸ್ಯೆಗೊಂದು ಶಾಶ್ವತ ಯೋಜನೆ ಕೊಡುವ ಕನಿಷ್ಟ ಕಾರ್ಯಕ್ರಮವನ್ನೂ ಜ್ಯಾರಿಗೆ ತರಲು ಸಾಧ್ಯವಾಗದ ಸರಕಾರಗಳು ಇದ್ದರೆಷ್ಟು, ಇಲ್ಲದಿದ್ದರೆಷ್ಟು ?
ಪ್ರಜೆಗಳಿಂದಲೇ ಸಂಗ್ರಹಿಸಲಾದ ಹಣವನ್ನು ವಿನಿಯೋಗಿಸಿ ಸಾಮಾನ್ಯವಾದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಈ ರಾಷ್ಟ್ರೀಯ ಪಕ್ಷಗಳನ್ನು ಪ್ರತಿನಿಧಿಸುವ ಕೊಟ್ಯಧಿಪತಿಗಳು, ಕ್ರಿಮಿನಲ್ ಹಿನ್ನೆಲೆಯವರೇ ಬೇಕಾ ? ಮತದಾರರಿಗೆ ಹಣ, ಹೆಂಡ, ಸಿಮೆಂಟ್ ಚೀಲ, ಟೈಲರಿಂಗ್ ಮಿಷನ್ ಇತ್ಯಾದಿಗಳನ್ನು ವಿತರಿಸುವ ಸಾಮಥ್ರ್ಯ ಇರುವವರೇ ಆಗಬೇಕಾ ? ಇಂಥ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳನ್ನು ಜ್ಯಾರಿಗೆ ತರಲು ಸರಕಾರಿ ಅಧಿಕಾರಿಗಳು ಸಾಲದೆ ? ಇಷ್ಟನ್ನೇ ಮಾಡಲು ಪಕ್ಷಗಳಲ್ಲಿ ಪ್ರಾಮಾಣಿಕನಾಗಿ ದುಡಿದ, ಸಾಮಾನ್ಯ ಕಾರ್ಯಕರ್ತನಾದ ಒಬ್ಬ ಬಡವನಿಗೆ ಸಾಧ್ಯವಿಲ್ಲವೇ ? ಬಡವನನ್ನು ಯಾಕೆ ಈ ಪಕ್ಷಗಳು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುತ್ತಿಲ್ಲ ?
ಬಡವರಿಗೆ ನೇರ್ಪಿಗೆ ಒಂದು ಪಡಿತರ ಚೀಟಿ ವಿತರಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಒಬ್ಬ ಬಡ ಫಲಾನುಭವಿ ತನ್ನ ಹಕ್ಕಿನ ಯೋಜನೆಯನ್ನು ತನ್ನದನ್ನಾಗಿಸಬೇಕಾದರೆ ಆತ ಪಡಬಾರದ ಪಾಡು ಪಡಬೇಕು. ಎಲ್ಲಿ ಹೋದರೂ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ.
ಕಳಂಕಿತರಿಗೂ ಈ ಸಲ ಪಕ್ಷದ ಟಿಕೇಟ್ ಸಿಕ್ಕಿದೆ, ಆದರೆ ಸಚಿವ ಸಂಪುಟ ರಚನೆ ಸಮಯದಲ್ಲಿ ಇವರನ್ನು ಹೊರಗಿಡಲಾಗುವುದು ಎಂದು ಕಿಂಚಿತ್ತೂ ನಾಚಿಕೆ, ಮಾನ-ಮಯರ್ಾದೆ ಇಲ್ಲದೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿಕೊಳ್ಳುತ್ತಾರೆ. ಟಿಕೇಟ್ ಪಡೆದುಕೊಳ್ಳಲು ಶಕ್ತರಾದ ಕಳಂಕಿತರು ಸಚಿವ ಸಂಪುಟದಲ್ಲೂ ಸ್ಥಾನ ದಕ್ಕಿಸಿಕೊಳ್ಳಲು ಯಶಸ್ವಿಯಾಗದೇ ಇರಲು ಸಾಧ್ಯವಿಲ್ಲ. ಅದನ್ನು ತಡೆಯಲು ಪರಮೇಶ್ವರ್ಗೆ ಸಾಧ್ಯವಾದೀತು ಎಂದು ನಂಬಿದರೆ ಹಾಗೆ ನಂಬಿದವರು ಮೂರ್ಖರಾಗಬೇಕು, ಅಷ್ಟೆ.
ಇತ್ತೀಚೆಗೆ ಬಹಿರಂಗಗೊಂಡ ಮಾಹಿತಿ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿಯ ಬಹುತೇಕ ಅಭ್ಯರ್ಥಿಗಳೂ ಕ್ರಿಮಿನಲ್ ಹಿನ್ನೆಲೆಯವರೇ. ಇವರೆಲ್ಲರೂ ಬಹು ಕೋಟ್ಯಧಿಪತಿಗಳು. ಇವರು ಬಡವರ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ. ಬಿಜೆಪಿ ಸರಕಾರ ಮಹಿಳೆಯರಿಗೆ ಸೀರೆ ವಿತರಿಸಿತು. ಕಾಂಗ್ರೆಸ್ ಸರಕಾರ ಸಿಮೆಂಟ್ ಚೀಲ ವಿತರಿಸಬಹುದು. ಬಡವರು
ಸ್ವಾಭಿಮಾನದಿಂದ, ತಮ್ಮ ಕಾಲ ಮೇಲೆ ತಾವೇ ನಿಲ್ಲಲು ಶಕ್ತವಾಗುವ ರೀತಿಯ ಯಾವ ಕಾರ್ಯಕ್ರಮಗಳೂ ಇವರಲ್ಲಿಲ್ಲ. ಅಂಥ ಉದ್ಧೇಶವಾಗಲಿ, ದೂರದೃಷ್ಟಿಯಾಗಲಿ ಈ
ಪಕ್ಷಗಳಲ್ಲಿಲ್ಲ.
ವಿವಿಧ ಬೇಡಿಕೆ ಮುಂದಿಟ್ಟು ರೈತರು, ಕೃಷಿಕರು, ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಸರಕಾರಿ ನೌಕರರು ಪ್ರತಿಭಟನೆ, ಧರಣಿ, ಮುಷ್ಕರ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಯಾವ ಬೇಡಿಕೆಗಳನ್ನೂ ಸರಕಾರ ಈಡೇರಿಸುವ ಕಡೆಗೆ ಗಮನ ಕೊಟ್ಟಂತೆ ಕಾಣುವುದೇ ಇಲ್ಲ. ಆದರೆ, ಸರಕಾರ ಶ್ರೀಮಂತ ಉದ್ಯಮಿಗಳಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಪ್ರಯೋಜನವಾಗುವಂಥ ಎಸ್ಇಝೆಡ್ ನಂಥ ಜನ ವಿರೋಧಿ ಯೋಜನೆಗಳನ್ನು ಯಾರ ಯಾವ ಬೇಡಿಕೆಗಳೂ ಇಲ್ಲದಿದ್ದರೂ ಬಹಳ ಆಸಕ್ತಿಯಿಂದ ಜ್ಯಾರಿಗೊಳಿಸುತ್ತಿರುವುದನ್ನು ಗಮನಿಸಿದರೆ ಸಾಕು, ಈ ಪಕ್ಷಗಳ ನಿಜ ಬಣ್ಣ ಅರಿಯಲು.
ಈ ದೇಶ, ಈ ರಾಜ್ಯ ನಿಜವಾದ ಅರ್ಥದಲ್ಲಿ ಉದ್ಧಾರವಾಗಬೇಕಾದರೆ ಮೊತ್ತ ಮೊದಲು ಮತದಾರರು ಇನ್ನಾದರೂ ಪ್ರಬುದ್ಧತೆ, ಪ್ರಜ್ಞಾವಂತಿಕೆಯನ್ನು ಪ್ರದರ್ಶಿಸಲೇಬೇಕು. ಅದು, ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಯಾವುದೇ ಮುಲಾಜೂ ಇಲ್ಲದೆ ತಿರಸ್ಕರಿಸುವ ಮೂಲಕ ಮಾತ್ರ ಸಾಧ್ಯ. ಯಾವುದೇ ಇತರ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವ ತುರ್ತು ಇಂದು
ನಿರ್ಮಾಣವಾಗಿದೆ. – ಶ್ರೀರಾಮ ದಿವಾಣ.

ಉಡುಪಿ: ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುವುದು ಎಂಬ ಚುನಾವಣಾ ಆಯೋಗದ ಭರವಸೆ ಸುಳ್ಳಾಗಿದೆ. ಪಾರದರ್ಶಕ ಚುನಾವಣೆ ಎನ್ನುವುದು ಕೇವಲ ಆಯೋಗದ ಪುಸ್ತಕಗಳಲ್ಲಿ ಮತ್ತು ಘೋಷಣೆಗಳಿಗೆ ಮಾತ್ರವೇ ಸೀಮಿತವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆ ಒಂದು ಕಾನೂನಾದರೆ, ಉಳಿದ ಪಕ್ಷಗಳು ಹಾಗೂ ಪಕ್ಷೇತರರಿಗೆ ಇನ್ನೊಂದು ಕಾನೂನು. ಪಕ್ಷೇತರರಿಗೆ ಯಾವುದೇ ರೀತಿಯ ಸೂಕ್ತ ಮಾಹಿತಿಗಳನ್ನು ಒದಗಿಸದೆ, ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಇದು ಬಹುದೊಡ್ಡ ಅನ್ಯಾಯ. ಈ ಎಲ್ಲಾ ಕಾರಣಗಳಿಗಾಗಿ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡುವಂತೆ ಹಕ್ಕೊತ್ತಾಯ ಮಂಡಿಸಿ ವಕೀಲರ ಮೂಲಕ ಕಾಪು ಕ್ಷೇತ್ರದ ಚುನಾವಣಾಧಿಕಾರಿಗೆ ನೋಟೀಸ್ ನೀಡಿದ್ದೇನೆ ಎಂದು ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮೇ 2 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಬಾರಿಯ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಇಡೀ ಚುನಾವಣಾ ವ್ಯವಸ್ಥೆಯೇ ಕೇವಲ ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ಗೆ ಅನುಕೂಲ ಮಾಡಿಕೊಡುವಂತೆ ಇದೆ. ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ತಲುಪಲೇಬಾರದು, ಚುನಾವಣಾ ಪ್ರಚಾರ ಕಾರ್ಯವನ್ನೇ ಮಾಡಬಾರದು ಎಂಬಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆಯೋಗವೇ ಸಿದ್ಧಪಡಿಸಿದ ಚುನಾವಣಾ ನೀತಿ ಸಂಹಿತೆಯ ಕಲಂ 8.12 ರಲ್ಲಿ ಕೆಲವು ನಿರ್ಧಿಷ್ಟ ಪಕ್ಷಗಳಿಗೆ ಮಾತ್ರ ಮತದಾರರ ಪಟ್ಟಿಯನ್ನು ಉಚಿತವಾಗಿ ನೀಡಲಾಗುವುದು ಎಂದು
ತಿಳಿಸಲಾಗಿದೆ. ನಾಮಪತ್ರದೊಂದಿಗೆ ಪಕ್ಷೇತರರಿಂದಲೂ ಹತ್ತು ಸಾವಿರ ರು.
ಪಡೆಯಲಾಗುತ್ತದೆ. ಆದರೆ ಪಕ್ಷೇತರರಿಗೆ ಹಣ ನೀಡುವುದಾಗಿ ಹೇಳಿದರೂ ಮತದಾರರ ಪಟ್ಟಿಯನ್ನು ನೀಡದೆ ಬಹುದೊಡ್ಡ ಅನ್ಯಾಯವೆಸಲಾಗಿದೆ ಎಂದು ವಿಜಯಕುಮಾರ್ ಹೆಗ್ಡೆ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷೇತರ ಅಭ್ಯರ್ಥಿಗಳ ಸ್ವಾತಂತ್ರ್ಯ ಮತ್ತು ಸಂವಿಧಾನಬದ್ಧ ಹಕ್ಕನ್ನೇ ಚುನಾವಣಾ ಆಯೋಗ ಕಸಿದುಕೊಂಡಿದೆ. ನ್ಯಾಯಯುತವಾದ ಚುನಾವಣೆ ಎಂದು ಹೇಳಿಕೊಳ್ಳುತ್ತಲೇ ತಪ್ಪು ಮಾಡುತ್ತಿದೆ. ಹಣ, ಹೆಂಡ ವಸ್ತುಗಳನ್ನು ಯಥಾ ಪ್ರಕಾರ ಹಂಚಲಾಗುತ್ತಿದೆ. ಆದರೆ, ಯಾವನೇ ಒಬ್ಬ ಅಭ್ಯರ್ಥಿಯ ಹೆಸರು ರದ್ಧಾಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಶಬ್ದಮಾಲಿನ್ಯ ಆಗಬಾರದೆಂದು ಇದೆ. ಆದರೆ ಗುರುತಿಸಲ್ಪಟ್ಟ ಪಕ್ಷಗಳಿಂದ ಕರ್ಕಶ ಧ್ವನಿವರ್ಧಕ ಕೇಳಿಬರುತ್ತಿದೆ. ಇಂಥದ್ದನ್ನೆಲ್ಲಾ ಕೇಳುವವರೇ ಇಲ್ಲ. ಚುನಾವಣಾ ಆಯೋಗದ ಇಂಥ ಎಲ್ಲಾ ರೀತಿಯ ತಾರತಮ್ಯ ನೀತಿಗಳ ವಿರುದ್ಧ ಉಡುಪಿ ಜಿಲ್ಲಾಧಿಕಾರಿ, ರಾಜ್ಯ ಮತ್ತು ದೇಶದ ಚುನಾವಣಾ ಆಯೋಗದ ಆಯುಕ್ತರಿಗೆ ದೂರು ನೀಡಿದ್ದೇನೆ ಹೆಗ್ಡೆ ತಿಳಿಸಿದರು. ವಿಜಯಕುಮಾರ್ ಹೆಗ್ಡೆಯವರ ಬೆಂಬಲಿಗರಾದ ವಿಲಿಯಂ ಸೋನ್ಸ್, ಪ್ರಶಾಂತ್ ಶೆಟ್ಟಿ, ಓಡಿ ಮುಗೇರ, ಭಾಸ್ಕರ್, ಸತೀಶ್ ಶೆಟ್ಟಿ ಮೊದಲಾದವರು ಮಾಧ್ಯಮಗೋಗೋಷ್ಟಿಯಲ್ಲಿ
ಉಪಸ್ಥಿತರಿದ್ದರು.

ಉಡುಪಿ: ಇದುವರೆಗೆ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಕಾರ್ಮಿಕರ, ಮಹಿಳೆಯರ, ರೈತರ ಪರವಾಗಿ ನಿಜವಾದ ಕಾಳಜಿಯಿಂದ ನಡೆದಕೊಂಡಿಲ್ಲ. ಬಡವರ, ದೇಶದ, ರಾಜ್ಯದ ಅಭಿವೃದ್ಧಿಯಾಗಿಲ್ಲ. ಜನಪರ ಆಡಳಿತ ನಡೆಸದೆ, ಕೇವಲ ಪಕ್ಷ ರಾಜಕಾರಣವನ್ನಷ್ಟೇ ನಡೆಸಿದೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ ಈ ಎರಡೂ ಪಕ್ಷಗಳ ನಾಯಕರು ಸ್ವಂತ ಅಭಿವೃದ್ಧಿ ಸಾಧಿಸಿದ್ದಾರೆ. ತಮ್ಮ ಬಿಸಿನೆಸ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲ್ಲವೂ ಪತ್ರಿಕಾಹೇಳಿಗೆ, ಪತ್ರಿಕಾಗೋಷ್ಟಿಗೆ
ಸೀಮಿತವಾಗಿದೆ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಪ್ ಇಂಡಿಯಾ (ಎಸ್ ಡಿಪಿಐ) ಮಾಜಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್ ಮಲ್ಪೆ ಆರೋಪಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಮಠ, ಮಂದಿರ, ಮಸೀದಿ, ಚರ್ಚು, ಪ್ರಾರ್ಥನಾ ಮಂದಿರಗಳಿಗೆ ಸರಕಾರದ ಹಣ ಬಿಡುಗಡೆ ಮಾಡುವ ಅಗತ್ಯವಿಲ್ಲ. ದೇವರ ಪ್ರಾರ್ಥನೆಗೆ ಬರುವ 90 ಶೇಕಡಾ ಜನರು ಬಡವರು. ಅವರಿಗೆ ಸರಕಾರದ ಹಣದಲ್ಲಿ ನಿರ್ಮಾಣಗೊಳ್ಳುವ ಆಡಂಭರದ, ಭವ್ಯ ಮಹಲುಗಳಿಂದೇನೂ ಪ್ರಯೋಜನವಿಲ್ಲ ಎಂದು ಹೇಳಿದ ಅಬ್ದುಲ್ ರೆಹಮಾನ್, ಎಸ್ ಡಿಪಿಐ ಜನರ ಧಾರ್ಮಿಕ ಭಾವನೆಗಳ ಜೊತೆ
ಚೆಲ್ಲಾಟವಾಡುವುದಿಲ್ಲ ಎಂದು ತಿಳಿಸಿದರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ ವ್ಯಕ್ತಿ, ಅಭ್ಯರ್ಥಿಯಾಗುವ ಮೊದಲು ಸೀಟಿಗಾಗಿ ಪ್ರಯತ್ನ ನಡೆಸಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ಕಾಂಗ್ರೆಸ್ ಸಿದ್ಧಾಂತಗಳ ಬಗ್ಗೆ ಮಾತಾಡಿದ್ದಾಗಲೀ, ಕೆಲಸ ಮಾಡಿದ್ದಾಗಲಿ ಇಲ್ಲ ಎಂದು ಟೀಕಿಸಿದ ಅಬ್ದುಲ್ ರೆಹಮಾನ್, ಜೆಡಿಎಸ್ ನಿಂದ ಸ್ಪರ್ಧಿಸಿರುವ ವಸಂತ ಸಾಲ್ಯಾನ್ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ನಿರಾಕರಿಸಲ್ಪಟ್ಟಾಗ ರಾತೋ ರಾತ್ರಿ ಪಕ್ಷಾಂತರ ಮಾಡಿದವರು. ಇವರಿಗೆಲ್ಲ ಸಿದ್ಧಾಂತಗಳೇ ಇಲ್ಲ ಎಂದು ಅಪಾದಿಸಿದರು.
ಎಸ್ ಡಿಪಿಐ ನಾಯಕರ ಜೊತೆ ಮಾತುಕತೆ ನಡೆಸಿದ ಕಾಂಗ್ರೆಸ್ ನ ಆಸ್ಕರ್ ಫೆರ್ನಾಂಡಿಸ್ ಅವರು, ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾ, ಅಲ್ಲಿ ಅವರಿಗೆ 3 ಸಾವಿರ ಕೊಟ್ಟಿದ್ದೇನೆ, ಇಲ್ಲಿ ಇವರಿಗೆ 5 ಸಾವಿರ ನೀಡಿದ್ದೇನೆ ಎನ್ನುತ್ತಾರೆ. ಇಂಥವುಗಳೆಲ್ಲ ಅಭಿವೃದ್ಧಿಯೂ ಅಲ್ಲ, ಇದೆಲ್ಲ ನಾಯಕರ ಲಕ್ಷಣವೂ ಅಲ್ಲ. ಅಭಿವೃದ್ಧಿಯ ಕಲ್ಪನೆಯೇ ಇವರಿಲ್ಲಿಲ್ಲ. ಇಂಥ ನಾಯಕರಿಂದ ರಾಜ್ಯ, ದೇಶ ಅಭಿವೃದ್ಧಿ ಕಾಣಲಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದಾದ್ಯಂತ ಎಸ್ ಡಿಪಿಐಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜನ ಈ ಬಾರಿ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಈ ಬದಲಾವಣೆ ಎಸ್ ಡಿಪಿಐ. ಉಡುಪಿ ಸಹಿತ ಇತರ ಕ್ಷೇತ್ರಗಳಲ್ಲಿ ಎಸ್ ಡಿಪಿಐ ಬಿಎಸ್ಪಿ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಕಾಪು ಅಭ್ಯರ್ಥಿ ಅಬ್ದುಲ್ ಹಕೀಂ ಹೇಳಿದರು.
ಎಸ್ ಡಿಪಿಐ ಮುಖಂಡರಾದ ನಿಯಾಮತ್ ಅಲಿ, ಹಸೈನಾರ್ ಕಟಪಾಡಿ, ರಫೀಕ್ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾಣದ ಸ್ವಾಮಿ ಮತದಾರರಿಗೆ ಕರೆ ನೀಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಸಿಪಿಐ, ಫಾರ್ವರ್ಡ್ ಬ್ಲಾಕ್, ಲೋಕಸತ್ತಾ ಮತ್ತು ಸರ್ವೋದಯ ಕರ್ನಾಟಕ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ರಾಜ್ಯ ಮಟ್ಟದಲ್ಲಿ ನಿರ್ಧರಿಸಿದೆ ಎಂದು ಸ್ವಾಮಿ ತಿಳಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿರುವ ಬೈಂದೂರು ಕ್ಷೇತ್ರದ ಮತದಾರರು, ಇಲ್ಲಿ ಕೆ.ಶಂಕರ್ ಅವರ ಕಡೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಬಡ ಕಾರ್ಮಿಕರು, ನಿವೇಶನರಹಿತರು, ಪಡಿತರ ಚೀತಿ ವಂಚಿತರು ಮೊದಲಾದವರ ಬಗ್ಗೆ ಪಕ್ಷ ನಡೆಸುತ್ತಿರುವ ಹೋರಾಟವನ್ನು ಇಲ್ಲಿನ ಮತದಾರರು
ಗಮನಿಸಿದ್ದಾರೆ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಉಡುಪಿ, ಕಾಪು, ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದ್ದು, ಇಲ್ಲೆಲ್ಲಾ ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಗಳನ್ನು
ಬೆಂಬಲಿಸುವಂತೆ ಸಿಪಿಐಎಂ ಮತದಾರರನ್ನು ವಿನಂತಿಸಿದೆ.
ಸಿಪಿಐಎಂ ಪಕ್ಷ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಸಂಕಟವಾಗಿದೆ. ಈ ಹಿಂದಿನ ಬಹುತೇಕ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಬಿಜೆಪಿ ಸೋಲಿಸುವ ಉದ್ಧೇಶದೊಂದಿಗೆ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಸೋಲಿಸಲು ಕರೆ ನೀಡಿದ ಕಾರಣ ಈ ಬಾರಿ ಇದು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಕಗ್ಗಂಟಾಗಿ ಪರಿಣಮಿಸಲಿದೆ.
ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಶಂಕರ್ ಹಾಗೂ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಭಾರತ ದೇಶದಲ್ಲಿ 100 ವರ್ಷ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಾಮೂಹಿಕ ನಾಯಕತ್ವವಿಲ್ಲ, ಸ್ವತಂತ್ರವಾಗಿ ಪಕ್ಷ ಸಂಘಟಿಸುವಂತಿಲ್ಲ, ಪಕ್ಷದಲ್ಲಿ ನಿಷ್ಠಾವಂತರಿಗೆ ಸ್ಥಾನವಿಲ್ಲ. ಹಣ ಮತ್ತು ಲಾಬಿ ನಡೆಸಿದರೆ ಮಾತ್ರ ಸ್ಥಾನ. ತತ್ವ ಸಿದ್ದಾಂತವನ್ನು ಗಾಳಿಗೆ ತೂರಿ, ಅರ್ಜಿಯೇ ಹಾಕದ ಅಭ್ಯರ್ಥಿಗೆ ಶ್ರೀಮತಿ ಸೋನಿಯಾ ಗಾಂಧಿಯವರ ದಿಲ್ಲಿಯಿಂದ ಬಿ.ಫಾರಂ ಬರುವಂತಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಇಟಲಿಯಿಂದ ಬಿ ಫಾರಂ ತರುವ ಕಾಲ ಸನ್ನಿಹಿತವಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಲೇವಡಿ ಮಾಡಿದ್ದಾರೆ.
ಅದಮಾರಿನಲ್ಲಿ ನಡೆದ ಕಾರ್ಯಕರ್ತರ ಸಬೆಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಬೆಲೆಯಿಲ್ಲ, ಅಭಿವೃದ್ದಿಯ ಚಿಂತನೆಯಿಲ್ಲ. ರಿಮೋಟ್ ಕಂಟ್ರೊಲ್ ನಾಯಕತ್ವದಲ್ಲಿ ಏಕಚಕ್ರಾಧಿಪತ್ಯ ದಿಂದ ದೇಶ ದಿವಾಳಿಯಾಗಿದೆ. ಬಿಜೆಪಿ ಪಕ್ಷದಲ್ಲಿ ಸಮರ್ಥ ನಾಯಕರಿಲ್ಲ ಭ್ರಷ್ಟಾಚಾರವೇ ಅವರ ಬಂಡವಾಳ, ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶೆಟ್ಟಿ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಸಮರ್ಥ ನಾಯಕರಿದ್ದಾರೆ. ಬದಲಾವಣೆಗಾಗಿ ಜನ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ಧಾರೆ. ಅಭಿವೃದ್ದಿ, ಜನಪರ ಯೋಜನೆಗಳು, ಅಂಗವಿಕಲರಿಗೆ ಮಾಸಾಶನ, ವೃದಾಪ್ಯ ವೇತನ, ವಿಧವಾ ವೇತನ ದ್ವಿಗುಣಗೊಳಿಸಿರುವುದು, ಶಾಲಾ ಮಕ್ಕಳಿಗೆ ಸೈಕಲ್, ಬಿಸಿಯೂಟ, ಸಂಧ್ಯಾ ಸುರಕ್ಷೆ, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಕರ್ನಾಟಕ ರಾಜ್ಯದಲ್ಲಿ ಬ್ಯಾರಿ ಅಕಾಡೆಮಿ ಸ್ಥಾಪನೆ, ಹಜ್ ಭವನ ನಿರ್ಮಾಣ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆ, ದೇಶದ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ರೈತರ
ಸಾಲಮನ್ನಾಗೊಳಿಸಿರುವ ಕುಮಾರಸ್ವಾಮಿಯವರ ಸಾಧನೆಯೇ ಜೆಡಿಎಸ್ ಗೆ ಶ್ರೀರಕ್ಷೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಪಕ್ಷದ ನಾಯಕರಾದ ವಾಸುದೇವ ರಾವ್, ಉದಯ ಹೆಗ್ಡೆ, ಯೋಗೀಶ್ ಶೆಟ್ಟಿ ಕಾಪು, ರಾಜೇಶ್ ಕರ್ಕೇರ, ಹರೀಶ್ ನಾಯಕ್, ಕರುಣಾಕರ ಶೆಟ್ಟಿ ಪಾದೂರು, ಆಲಿ ಕಳ್ತೂರು, ಸಚಿನ್ ಶೆಟ್ಟಿ ಮಜೂರು, ಪ್ರಕಾಶ್ ಕೋಟ್ಯನ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಭ್ಯರ್ಥಿಗಳ ನಡುವೆ ಸಮನ್ವಯ ಮಾಡಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಜೊತೆ ಜೆಡಿಎಸ್ ಮುಖಂಡ ಯು.ಆರ್.ಸಭಾಪತಿಯವರನ್ನು ಸಮಿತಿಯಲ್ಲಿ ನೇಮಕ ಮಾಡಿರುವುದು ಕಾಂಗ್ರೆಸ್ ಪಕ್ಷದ ನಾಯಕತ್ವದ ದಿವಾಳಿತನವನ್ನು ತೋರಿಸುತ್ತದೆ ಎಂದು ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಪಟ್ಲ ಆಣ್ಯಯ್ಯ ನಾಯಕ್ ಟೀಕಿಸಿದ್ದಾರೆ.
ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಸಂತ ವಿ.ಸಾಲ್ಯಾನ್ ಪರ ಕಾಜರಗುತ್ತುವಿನಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಕೊರತೆ ಇರುವುದು ಈಗಾಗಲೇ ಸಾಬೀತಾಗಿದೆ. ಕಾಂಗ್ರೆಸ್ ನಲ್ಲಿರುವ ಹೆಚ್ಚಿನ ಎಲ್ಲಾ ಪ್ರಮುಖ ನಾಯಕರು ಜೆಡಿಎಸ್ ಪಕ್ಷದಲ್ಲಿ ನಾಯಕತ್ವದ ತರಬೇತಿ ಪಡೆದವರು. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಂದ ಹಿಡಿದು ಈಗಿನ ಸಭಾಪತಿಯವರವರೆಗೆ ಹಲವು ಮಂದಿ ನಾಯಕರು ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗಿರುವವರೇ ಆಗಿದ್ದಾರೆಂದು ನಾಯಕ್ ಹೇಳಿದರು.
ಸಭಾಪತಿಯವರು ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದು, ಪಕ್ಷದ ನಾಯಕರಾದ
ಕುಮಾರಸ್ವಾಮಿಯವರಿಂದ ಎಲ್ಲವನ್ನು ಪಡೆದುಕೊಂಡು ಇದೀಗ ಪಕ್ಷಕ್ಕೆ ರಾಜಿನಾಮೆ ನೀಡದೇ ಪಕ್ಷಾಂತರವಾಗುವ ಸಿದ್ದತೆಯಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ದಾಹದಿಂದ ಒದ್ದಾಡುತ್ತಿದ್ದು, ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಲಿದ್ದು, ಚಿಆಕಾರದ ಭ್ರಮೆ ಅವರನ್ನು ನಿರಾಸೆ ಮಾಡಲಿದೆ. ಶೋಷಿತರ, ದಲಿತರ,ಅಲ್ಪಸಂಖ್ಯಾತರ, ಜನಪರ ಯೋಜನೆಗಳ ಚಿಂತಕ, ಆತ್ಯುತ್ತಮ ಆಡಳಿತಗಾರರಾಗಿರುವ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ತವಕದಲ್ಲಿ ಮತದಾರರು ಇದ್ದಾರೆ ಎಂದು ಅಣ್ಣಯ್ಯ ನಾಯಕ್ ತಿಳಿಸಿದರು.
80 ಬಡಗುಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ ನಾಯಕ್, ರಮೇಶ್ ಶೆಟ್ಟಿ ಬೆಳ್ಳಂಪಳ್ಳಿ, ವಾಸುದೇವ್ ರಾವ್, ಯೋಗಿಶ್ ಶೆಟ್ಟಿ ಕಾಪು, ದಿನೇಶ್ ಭಟ್ ಕೋಡಿಬೆಟ್ಟು, ಶ್ರೀಕಾಂತ್, ರಾಧಾಕೃಷ್ಣ ಶೆಟ್ಟಿ, ಪ್ರದೀಪ್ ಜಿ. ನಾಯ್ಕ್, ಗಿರೀಶ್ ಶೆಟ್ಟಿ ಬೆಳ್ಳಂಪಳ್ಳಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಡುಪಿ: ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟದ ಹಾದಿಯಲ್ಲಿ ಹಲವಾರು ಒತ್ತಡಗಳು, ಬೆದರಿಕೆಗಳು, ಅಮಿಷಗಳು ಬಂದಿತ್ತು. ಆದರೆ, ತಾನು ಯಾವುದಕ್ಕು ಬಗ್ಗದೇ ಹೋರಾಟವನ್ನು ಮುಂದುವರಿಸಿದ್ದೇನೆ. ಮುಂದೆಯೂ
ಮುಂದುವರಿಸಲಿದ್ದೇನೆ. ಯುಪಿಸಿಎಲ್ನಿಂದ ತಾನು ಐದು ಪೈಸೆ ಸಹ ಪಡೆದುಕೊಂಡಿಲ್ಲ ಎಂದು ಎ.24 ರಂದು ಬೆಳಗ್ಗೆ ಗಂಟೆ 7.30 ಕ್ಕೆ ಪಡುಬಿದ್ರಿಯ ಖಡ್ಗೇಶ್ವರಿ
ಬ್ರಹ್ಮಸ್ಥಾನದಲ್ಲಿ ಪ್ರಮಾಣ ಮಾಡಲಿದ್ದೇನೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೂಡಾ ಇದೇ ರೀತಿ ಪ್ರಮಾಣ ಮಾಡಲಿ ಎಂದು ಕಾಪು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ಸವಾಲು ಹಾಕಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.22 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ ಹತ್ತು ವರ್ಷಗಳಿಂದ ಲಕ್ಷಾಂತರ ರು. ಕರ್ಚು ಮಾಡಿ ನಿರಂತರವಾಗಿ ಯುಪಿಸಿಎಲ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಸ್ಥಳೀಯ ಶಾಸಕರು ಮಾಡುವ ಕೆಲಸವನ್ನು ಮಾಡುವ ಮೂಲಕ ಪ್ರಾನದ ಹಂಗು ತೊರೆದು ಸಂತ್ರಸ್ಥರಿಗೆ ಸಹಾಯ ಮಾಡಿದ್ದೇನೆ. ಇದೀಗ ಇವರೆಲ್ಲರ ಬೆಂಬಲದೊಂದಿಗೆ ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೆಗ್ಡೆ ಹೇಳಿದರು.
ಯುಪಿಸಿಎಲ್ ಮುಂದುವರಿದರೆ ಎಂಡೋಸಲ್ಫಾನ್ ದುರಂತದಂತೆ ಇಲ್ಲೂ ಅನಾಹುತವಾಗಲಿದೆ. ಮಹಿಳೆಯರಲ್ಲಿ ಗರ್ಭಪಾತ, ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆ, ಮೀನುಗಾರಿಕೆಗೂ ಸಮಸ್ಯೆಯಾಗಿ ಕೊನೆಗೆ ಮೀನು ತಿಂದವರು ಕ್ಯಾನ್ಸರ್ ಗೆ ತುತ್ತಾಗುವ ಅಪಾಯವೂ ಇದೆ. ಇದೆಲ್ಲವನ್ನೂ ಮಹಿಳೆಯವರ ಸಹಿತ ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಯುಪಿಸಿಎಲ್ ವಿರುದ್ಧದ ಜನರ ಧ್ವನಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಬೇಕೆಂಬ ಉದ್ಧೇಶದಿಂದ ತಾನು ಪಕ್ಷೇತರನಾಗಿ ಸ್ಫಧರ್ಿಸುತ್ತಿದ್ದೇನೆ ಎಂದು ವಿಜಯ ಹೆಗ್ಡೆ ಸ್ಪಷ್ಟಪಡಿಸಿದರು.
ಯುಪಿಸಿಎಲ್ ಸ್ಥಾವರವನ್ನು ಕ್ಷೇತ್ರದಿಂದ ಓಡಿಸುವುದಕ್ಕೆ ಬೇಕಾದ ಕಾನೂನಾತ್ಮಕ ಕ್ರಮಕೈಗೊಳ್ಳುವುದು, ಸಮುದ್ರದ ಅಲೆಯಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕವನ್ನು ಕಾಪು ಕ್ಷೇತ್ರದಲ್ಲೇ ಸ್ಥಪಿಸುವ ಮೂಲಕ ಪ್ರಪಂಚದಲ್ಲೇ ಕಾಪು ಕ್ಷೇತ್ರಕ್ಕೆ ಹೆಸರು ಬರುವಂತೆ ಮಾಡುವುದು, ಇದರ ಮೂಲಕ ಲಕ್ಷಾಂತರ ಜನಕ್ಕೆ ಉದ್ಯೋಗ, 60 ಪೈಸೆಗೆ ವಿದ್ಯುತ್, ಕೃಷಿಗೆ ಆದ್ಯತೆ ನೀಡುವುದರ ಜೊತೆಗೆ ಕೃಷಿ ಸಂಶೋಧನಾ ಸಂಸ್ಥೆಗಳ ಸ್ಥಪನೆಗೆ ಒತ್ತ ನೀಡುವುದು, ಕಾಡು, ಕೆರೆಗಳ ಅಭಿವೃದ್ಧಿಗೆ ಆದ್ಯತೆ ಮೊದಲಾದುವು ತನ್ನ ಪ್ರಣಾಳಿಕೆ ಎಂದು ವಿಜಯ ಕುಮಾರ್ ಹೆಗ್ಡೆ ವಿವರ ನಿಡಿದರು.
ಜಯಪ್ರಕಾಶ್, ಮುಹಮ್ಮದ್ ಫಯಾಝ್, ಯು.ಪದ್ಮನಾಭ ಶೆಟ್ಟಿ ನಿಡ್ಡೋಡಿ, ಸುದತ್ ಜೈನ್, ಮಹೇಂದ್ರ ಕುಮಾರ್ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.