Posts Tagged ‘cpi’

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ಮತ್ತು ಜನತೆಯ ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಯು ಫೆ.20 ಮತ್ತು 21 ರಂದು ಎರಡು ದಿನಗಳ ಕಾಲ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ ಎಂದು ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕರಾದ ಅದಮಾರು ಶ್ರೀಪತಿ ಆಚಾರ್ಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮುಷ್ಕರದ ಬಗ್ಗೆ ವಿವರ ನೀಡಿದರು.
ಫೆ.20 ರಂದು ಬೆಳಗ್ಗೆ 9 ಗಂಟೆಗೆ ಕುಂದಾಪುರದಲ್ಲಿ ಮತ್ತು ಬೆಳಗ್ಗೆ ಗಂಟೆ 10.30 ಕ್ಕೆ ಉಡುಪಿಯ ಅಜ್ಜರಕಾಡು ಎಲ್ಐಸಿ ಕಚೇರಿ ಆವರಣದಿಂದ ಕಾರ್ಪೋರೇಶನ್ ಬ್ಯಾಂಕ್ ಸ್ಥಾಪಕರ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಉದ್ಯೋಗಾವಕಾಶಗಳನ್ನು ಉಳಿಸಿ ಹೆಚ್ಚಿಸಲು ಸೂಕ್ತ ಪ್ಯಾಕೇಜ್ ರೂಪಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಶೆಡ್ಯೂಲ್ ಗಳ ವ್ಯತ್ಯಾಸವಿಲ್ಲದೆ ಸಾಮಾಜಿಕ ಸುರಕ್ಷೆ ಮತ್ತು ಅದಕ್ಕಾಗಿ ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ನಿಧಿಯ ಸ್ಥಾಪನೆ ಹಾಗೂ ಲಾಭದಾಯಕವಾಗಿರುವ ಸಾರ್ವಜನಿಕ ರಂಗದ ಶೇರುಗಳನ್ನು ಹಿಂತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಇತ್ಯಾದಿ ಒಟ್ಟು ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲು ಎರಡು ದಿನದ ಮುಷ್ಕರ ನಡೆಸಲಾಗುತ್ತಿದ್ದು, ಇದು ಐತಿಹಾಸಿಕವಾಗಲಿದೆ ಎಂದು ಆಚಾರ್ಯ ತಿಳಿಸಿದರು.
ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಇಂಟಕ್, ಬಿಎಂಎಸ್, ಯುಟಿಯುಸಿ, ಟಿಯುಸಿಸಿ ಮತ್ತಿತರ ಕಾರ್ಮಿಕ ಸಂಘಟನೆಗಳು, ಬ್ಯಾಂಕ್, ವಿಮಾ, ರೈಲ್ವೆ ಮುಂತಾದ ನಾಕರರ ಅಖಿಲ ಭಾರತ ಸಂಘಟನೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ಸಂಘಟನೆಗಳ ಸಹಿತ ಹಲವಾರು ಸಂಘಟನೆಗಳು 2 ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದೆ. 10 ಕೋಟಿಗೂ ಅಧಿಕ ಮಂದಿ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಆಚಾರ್ಯರು ಮಾಹಿತಿ ನೀಡಿದರು.
1991 ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಹಾಗೂ ಇಂದಿನ ಪ್ರಧಾನಿ ಡಾ.ಮನಮೋಹನ ಸಿಂಗರು ಅಮೇರಿಕಾ ಮತ್ತಿತರ ಸಾಮ್ರಾಜ್ಯಶಾಹಿಗಳ ಒತ್ತಡಕ್ಕೆ ಮಣಿದು ಆರಂಭಿಸಿದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಕೆಲವೇ ಕೆಲವು ಜನ ಗುತ್ತೇದಾರಿ ಬಂಡವಾಳಗಾರರು ಹಾಗೂ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಅಪಾರ ಸಂಪತ್ತನ್ನು ಗಳಿಸಿಕೊಳ್ಳುವಂತೆ ಮಾಡಿದೆ. ಇದರಿಂದಾಗಿ ದೇಶದ ಬಹುಸಂಖ್ಯಾತ ಕಾಮರ್ಿಕರು ಮತ್ತು ಬಡ ಜನತೆ ದಟ್ಟ ದಾರಿದ್ರ್ಯದಲ್ಲಿ ನರಳಿ ಕಂಗಾಲಾಗುವಂತೆ ಮಾಡಿವೆ ಎಂದು ಶ್ರೀಪತಿ ಆಚಾರ್ಯ ಹೇಳಿದರು.
ಜವಾಹರ ಲಾಲ್ ನೆಹರೂ ಅವರಿಂದ ಮೊದಲ್ಗೊಂಡು ಇಂದಿರಾ ಗಾಂಧಿ ವರೆಗಿನ ಸರಕಾರಗಳು ಬಡವ ಮತ್ತು ಶ್ರೀಮಂತರ ನಡುವೆ ತೋರಿಕೆಗಾದರೂ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದವು. ಇದೀಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ತಾನು ಕೇವಲ ಶ್ರೀಮಂತರ ಪರ ಮತ್ತು ಬಡವರು ಏನಾದರೂ ಆಗಲಿ ಎಂಬ ನೀತಿಯನ್ನು ಬಹಿರಂಗವಾಗಿಯೇ ಅನುಸರಿಸುತ್ತಿದೆ. ದೇಶದ ದುಡಿಯುವ ಜನತೆ ಉತ್ಪಾದಿಸಿದ ಸಂಪತ್ತನ್ನು ಶ್ರೀಮಂತರಿಗೆ ವರ್ಗಾಯಿಸುವುದಷ್ಟೇ ತನ್ನ ಕೆಲಸ ಎಂದು ಯುಪಿಎ ಸರಕಾರ ಭಾವಿಸಿದಂತಿದೆ. ದೇಶದ ಸಾರ್ವಜನಿಕ ರಂಗವನ್ನು ಸರ್ವನಾಶ ಮಾಡಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಬೆಲೆ ಏರಿಕೆಗೆ ಸರಕಾರವೇ ಪ್ರಚೋದನೆ ನೀಡುತ್ತಿದೆ. ವಿದೇಶಿ ಬಂಡವಾಳಗಾರರನ್ನು ಓಲೈಸುವ ಸಲುವಾಗಿ ಕಾರ್ಮಿಕರು ದಶಕಗಳ ಕಾಲ ಹೋರಾಡಿ ಗಳಿಸಿದ ಹಕ್ಕುಗಳನ್ನೂ ಸರಕಾರ ಮುರಿಯುತ್ತಿದೆ ಎಂದು ಆಚಾರ್ಯ ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾರ್ಮಿಕ ನಾಯಕರಾದ ಬಾಲಕೃಷ್ಣ ಶೆಟ್ಟಿ, ಕೆ.ವಿ.ಭಟ್ ಹಾಗೂ ಪಿ.ವಿಶ್ವನಾಥ ರೈ ಉಪಸ್ಥಿತರಿದ್ದರು.

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮತ್ತು ದುಡಿಯುವ ಜನತೆಯ ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶವ್ಯಾಪಿ ಪ್ರತಿಭಟನೆಯ ಅಂಗವಾಗಿ ಕಾರ್ಮೀಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ನೂರಾರು ಕಾರ್ಮೀಕರು ಇಂದು ಸಂಜೆ ಉಡುಪಿ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ, ಸಾಮೂಹಿಕ ಧರಣಿಯೊಂದಿಗೆ ಸ್ವಯಂ ಬಂಧನಕ್ಕೆ ಒಳಗಾದರು.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಉದ್ಯೋಗಾವಕಾಶಗಳನ್ನು ಉಳಿಸಲು ಸೂಕ್ತ ಪ್ಯಾಕೇಜ್ ಜ್ಯಾರಿಗೊಳಿಸಬೇಕು, ಕಾರ್ಮೀಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಬೇಕು, ಕಾರ್ಮೀಕ
ಕಾನೂನುಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು, ಕಾರ್ಮೀಕರಿಗೆ ಸಾಮಾಜಿಕ ಭದ್ರತೆ ನೀಡಬೇಕು, ಸಾರ್ವಜನಿಕ ರಂಗದ ಶೇರು ಮಾರಾಟ ಮಾಡಲೇಬಾರದು, ಗುತ್ತಿಗೆ ಕಾರ್ಮೀಕ ಪದ್ದತಿಯನ್ನು ರದ್ದು ಮಾಡಬೇಕು, ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕು,
ಶಾಸನಬದ್ದವಾಗಿ ಕನಿಷ್ಟ ವೇತನ 10 ಸಾವಿರ ರು. ನೀಡಬೇಕು, ಎಲ್ಲರಿಗೂ ಬೋನಸ್ ಸಿಗಬೇಕು, ಗ್ರಾಚುಯಿಟಿ ಮೊತ್ತ ಏರಿಕೆ ಮಾಡಬೇಕು, ಎಲ್ಲರಿಗೂ ಭವಿಷ್ಯನಿಧಿ ಸವಲತ್ತು ನೀಡಬೇಕು, ರಾಷ್ಟ್ರೀಯ ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಹಿಂತೆಗೆದುಕೊಳ್ಳಬೇಕು, ಬ್ಯಾಂಕ್, ವಿಮಾರಂಗ, ಬಿಎಸ್ಎನ್ಎಲ್ ಖಾಸಗೀಕರಣ ಪ್ರಕ್ರಿಯೆಯನ್ನು ನಿಲ್ಲಿಸಬೇಕು, ವಸತಿ ರಹಿತರಿಗೆ ವಸತಿ ಮತ್ತು ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಜೆಸಿಟಿಯು ಸರಕಾರದ ಮುಂದಿಟ್ಟಿದೆ.
ಉಡುಪಿಯ ಹಳೆ ತಾಲೂಕು ಕಚೇರಿ ಪರಿಸರದಿಂದ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಹೊರಟ ನೂರಾರು ಕಾರ್ಮೀಕರು, ಕೋರ್ಟ್ ರಸ್ತೆ, ಕಲ್ಪನಾ ಸರ್ಕಲ್, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ದಾರಿಯಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗಕ್ಕೆ ಬಂದು ಇಲ್ಲಿ ಸಾಮೂಹಿಕ ಧರಣಿ ನಡೆಸಿದರು.
ಜೆಸಿಟಿಯು ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಸಿಐಟಿಯು ರಾಜ್ಯ
ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಮುಂದಾಳು ಕೆ.ವಿ.ಭಟ್ ಹಾಗೂ ಬಿಎಂಎಸ್ ಮುಖಂಡ ಕೆ.ಬಾಲಗಂಗಾಧರ ರಾವ್ ಧರಣಿಯನ್ನು ಉದ್ಧೇಶಿಸಿ ಮಾತನಾಡಿದರು. ವಿವಿಧ ಸಂಘಟನೆಗಳ ಪ್ರಮುಖರಾದ ಪಿ.ವಿಶ್ವನಾಥ ರೈ, ಯು.ಗುರುದತ್, ಶಶಿಧರ ಗೊಲ್ಲ, ದೋಗು ಸುವರ್ಣ, ಪುಷ್ಪಾ ಕಾಪು, ಸುಜಾತಾ ಶೆಟ್ಟಿ ಒಳಕಾಡು, ಕೃಷ್ಣಮ್ಮ ಪಡುಬಿದ್ರಿ, ಶಾರದಾ ಮಲ್ಪೆ, ಸುಗಂಧಿ ಕೆಳಾರ್ಕಳಬೆಟ್ಟು ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು.
ಸಾಮೂಹಿಕ ಧರಣಿಯ ಬಳಿಕ ಪೊಲೀಸರು 250 ಕ್ಕೂ ಅಧಿಕ ಮಂದಿ ಕಾರ್ಮೀಕರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ಉಡುಪಿ: ಡೀಸೆಲ್ ದರ ಏರಿಕೆ, ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತೆಗೆದುಕೊಂಡ ಜನ ವಿರೋಧಿ ಮತ್ತು ದೇಶ ವಿರೋಧಿ ಕ್ರಮಗಳನ್ನು ಖಂಡಿಸಿ ಬಿಜೆಪಿ ಮತ್ತು ಇತರ ಪಕ್ಷಗಳು ನೀಡಿದ ಭಾರತ ಬಂದ್ ಕರೆಗೆ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಉಡುಪಿಯಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ. ಸಿಟಿ, ಸರ್ವಿಸ್, ಎಕ್ಸ್ ಪ್ರೆಸ್ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಓಡಾಟ ಸ್ಥಗಿತಗೊಳಿಸಿದೆ. ಸಿಟಿ ಬಸ್ ನಿಲ್ದಾಣದಲ್ಲಿ ಯುವಕರು ಚೆಂಡಾಟ ಆಡುತ್ತಿದ್ದರೆ, ಸರ್ವಿಸ್ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಉತ್ತರ ಕರ್ನಾಟಕದ ಮೂಲದ ಕಾರ್ಮೀಕರು ಬಸ್ ಬರುತ್ತೋ, ಹೊರಡುತ್ತೋ ಎಂದು ಕಾದು ಕುಳಿತಿದ್ದಾರೆ.
ಬಹುತೇಕ ಅಂಗಡಿ ಮುಂಗಟ್ಟುಗಳು ವ್ಯವಹಾರ ಸ್ಥಗಿತಗೊಳಿಸಿವೆ. ಅಲ್ಲಲ್ಲಿ ಒಂದೆರಡು ಅಂಗಡಿಗಳು ಮತ್ತು ಆಟೋ ರಿಕ್ಷಾಗಳು ಓಡಾಟ ನಡೆಸುತ್ತಿವೆ. ಖಾಸಗಿ ವಾಹನಗಳಲ್ಲಿ ಜನರು ಸಂಚರಿಸುತ್ತಿದ್ದಾರೆ. ಮೆಡಿಕಲ್ ಗಳು ವ್ಯವಹಾರ ನಡೆಸುತ್ತಿವೆ.
ಪೂರ್ವಾಹ್ನ ಗಂಟೆ 11.30 ಕ್ಕೆ ಬಿಜೆಪಿ ಪಕ್ಷದ ವತಿಯಿಂದ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಸ್ಥಳ: ಉಡುಪಿ ಸಿಟಿ ಬಸ್ ನಿಲ್ದಾಣ, ಸಮಯ: ಪೂರ್ವಾಹ್ನ ಗಂಟೆ 10 ಕ್ಕೆ, ಚಿತ್ರ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿದ್ದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಗೆಲುವಿಗಾಗಿ ಉದಯವಾಣಿ ಪತ್ರಿಕೆಗೆ ಹಣ ಕೊಟ್ಟು ಬಿಜೆಪಿ ಪರವಾದ ಸುದ್ದಿ ಪ್ರಕಟವಾಗುವಂತೆ ಮಾಡಿದ (ಕಾಸಿಗಾಗಿ ಸುದ್ದಿ) ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಚುನಾವಣಾಧಿಕಾರಿಯವರಿಗೆ ಮಾ.14 ರಂದು ದೂರು ನೀಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ಚುನಾವಣಾ ಏಜೆಂಟ್ ಆಗಿರುವ ವಕೀಲ ವಿಜಯ ಹೆಗ್ಡೆ ಅವರು ಬುಧವಾರ ಸಂಜೆ ಚುನಾವಣಾ ಅಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ದ ದೂರು ಸಲ್ಲಿಸಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಪಕ್ಷ ಉದಯವಾಣಿ ಪತ್ರಿಕೆಯ ವಿರುದ್ದ ದೂರು ನೀಡಬೇಕಾಗಿತ್ತು. ಲಕ್ಷಾಂತರ ರು. ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಬಿಜೆಪಿ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ುದಯವಾಣಿ ಪತ್ರಿಕೆ ಅಪರಾಧ ಎಸಗಿತ್ತು.
ಈ ರೀತಿಯಾಗಿ ಹಣ ಪಡೆದು ಜಾಹೀರಾತಿನ ಬದಲು ಸುದ್ದಿ ರೂಪದಲ್ಲಿ ಒಂದು ಪಕ್ಷದ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ಉದಯವಾಣಿ ದಿನ ಪತ್ರಿಕೆಯು ಓದುಗರಿಗೆ, ಚುನಾವಣಾ ಆಯೋಗಕ್ಕೆ, ಸರಕಾರಕ್ಕೆ, ಪತ್ರಿಕಾ ಕ್ಷೇತ್ರಕ್ಕೆ ಅಪಚಾರವೆಸಗಿತ್ತು.
ಆದರೆ, ಉದಯವಾಣಿ ವಿರುದ್ದ ದೂರು ನೀಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉದಯವಾಣಿಯಲ್ಲಿ ತಮ್ಮ ಹೆಸರು, ಸುದ್ದಿ, ಫೋಟೋ ಯಾವುದೂ ಪ್ರಕಟವಾಗದೇ ಇರಬಹುದೆಂ ಭಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ವಿರುದ್ದ ದೂರು ನೀಡಿ ಕೈತೊಳೆದುಕೊಂಡಿದ್ದಾರೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಮರು ಚುನಾವಣೆಯ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವಂತೆಯೇ ಮಣಿಪಾಲದಿಂದ ಪ್ರಕಟವಾಗುತ್ತಿರುವ ‘ಉದಯವಾಣಿ’ ದಿನ ಪತ್ರಿಕೆಯು ಮೂರನೇ ದಿನವಾದ ಇಂದೂ (ಮಾ.14) ಸಹ ಕಾಸಿಗಾಗಿ ಸುದ್ದಿ ಪ್ರಕಟಿಸಿದೆ.
ಮಾ.14 ರ ುದಯವಾಣಿಯ 12 ನೇ ಪುಟದಲ್ಲಿ ‘ಮೀನುಗಾರರಿಗೆ ರಾಜ್ಯ ಸರಕಾರದ ಬಂಪರ್ ಕೊಡುಗೆ’ ಎಂಬ ಶಿರ್ಷಿಕೆಯಡಿಯಲ್ಲಿ ಬಿಜೆಪಿ ಪರವಾದ ವಿಶೇಷ ಬರಹವನ್ನು ಪ್ರಕಟಿಸಿ ಪತ್ರಿಕಾರಂಗಕ್ಕೆ ಕಳಂಕ ಹಚ್ಚಿದೆ. ಈ ಬರಹದೊಂದಿಗೆ ಮೀನುಗಾರಿಕಾ ನಿಗಮದ ಅಧ್ಯಕ್ಷರ ಹಾಗೂ ಮೀನುಗಾರಿಕಾ ಫಡರೇಶನಿನ ಅಧ್ಯಕ್ಷರ ಅಭಿಪ್ರಾಯಗಳನ್ನೂ ಪ್ರಕಟಿಸಿದೆ. ಇವರಿಬ್ಬರೂ ಬಿಜೆಪಿ ನಾಯಕರೂ ಹೌದು.
ಕಳೆದ ಮೂರ್ನಾಲ್ಕು ದಿನಗಳಿಂದ ಉದಯವಾಣಿಯ 12 ನೇ ಪುಟದಲ್ಲಿ ಪ್ರತಿದಿನವೂ ಬಿಜೆಪಿ ಪರವಾದ ವಿಶೇಷ ಲೇಖನಗಳು ಪ್ರಕಟವಾಗುತ್ತಿದ್ದು, ಇವುಗಳನ್ನು ಸಂಬಂಧಪಟ್ಟವರಿಂದ ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಲೇಖನದ ರೂಪದಲ್ಲಿ ಉದಯವಾಣಿ ಪ್ರಕಟಿಸುತ್ತಿದೆ.
ಬಿಜೆಪಿ ಮತ್ತು ಉದಯವಾಣಿ ಈ ಮೂಲಕ ಚುನಾವಣಾ ಆಯೋಗ, ಚುನಾವಣಾ ವೀಕ್ಷಕರು, ಸರಕಾರವನ್ನು ವಂಚಿಸುತ್ತಿದೆ. ಚುನಾವಣಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಕಾಂಗ್ರೆಸ್ ನಾಯಕರಾಗಲೀ, ಜೆಡಿಎಸ್ ನಾಯಕರಾಗಲೀ ಕಾಸಿಗಾಗಿ ಸುದ್ದಿಯ ವಿರುದ್ದ ಸಂಬಂಧಪಟ್ಟವರಿಗೆ ಇನ್ನೂ ಸಹ ದೂರು ನೀಡದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಮೂಡಿಗೆರೆ: ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ಕಚೇರಿ ಎದುರು ಧ್ವಜಕಟ್ಟೆಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿ ಕೋಮುಗಲಭೆಗೆ ಷಡ್ಯಂತ್ರ ಹೆಣೆದವರನ್ನು ರಾಷ್ಟ್ರದ್ರೋಹದ ಆಪಾದನೆಯಲ್ಲಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಸಮಾನ ಮನಸ್ಕರ ವೇದಿಕೆಯು ಮೂಡಿಗೆರೆ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ದೇಶಭಕ್ತಿ ಮತ್ತು ದೇಶರಕ್ಷಣೆಯ ಗುತ್ತಿಗೆ ಪಡೆದವರಂತೆ ವೇದಿಕೆಗಳಲ್ಲಿ ನಿಂತು ಭಾಷಣ ಮಾಡುವ ಶ್ರೀರಾಮಸೇನೆಯ ಕಾರ್ಯಕರ್ತರು ಸಿಂದಗಿಯಲ್ಲಿ ಪಾಕಿಸ್ತಾನಿ ಧ್ವಜವನ್ನು ಹಾರಿಸಿ ರಾಷ್ಟ್ರದ್ರೋಹವೆಸಗಿದ್ದು ಕೋಮುಗಲಭೆಗೆ ಷಡ್ಯಂತ್ರದ ಪ್ರಚೋದನೆ ನಡೆಸಲು ತಯಾರಿ ನಡೆಸಿದ್ದರು. ೨೦೦೮ರಲ್ಲಿ ಬಿಜಾಪುರದ ಟಿಪ್ಪು ಸುಲ್ತಾನ್ ವೃತ್ತದಲ್ಲೂ ಪಾಕಿಸ್ತಾನಿ ಧ್ವಜ ಹಾರಾಡಿಸಲಾಗಿತ್ತು. ಆ ಕುರಿತು ತನಿಖೆ ನಡೆಸದೆ ಇದ್ದ ಕಾರಣ ಸಿಂದಗಿಯಲ್ಲಿ ಅದು ಮತ್ತೆ ಮರುಕಳಿಸಿದ್ದೆ. ಹಿಂದೂ ಮುಸ್ಲಿಮರ ಸೌಹಾರ್ದ ಸಂಬಂಧವನ್ನು ಸಹಿಸದ ಇಂತಹ ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಒತ್ತಾಯಿಸಿದರು.
ಸಿಪಿಐನ ಜಿಲ್ಲಾ ಮುಖಂಡ ಬಿ.ಕೆ. ಲಕ್ಷ್ನಣ್ ಕುಮಾರ್ ಮಾತನಾಡುತ್ತಾ, ಪಾಕ್ ಧ್ವಜ ಹಾರಿಸಿ ಜನರಲ್ಲಿ ಕೋಮು ಭಾವನೆ ಬಿತ್ತುವಂತೆ ಮಾಡುತ್ತಿರುವ ದುಷ್ಕರ್ಮಿಗಳ ಕೃತ್ಯ ನಿಜಕ್ಕೂ ಆತಂಕಕಾರಿಯಾಗಿದೆ. ಈ ಕೃತ್ಯ ಉಗ್ರಗಾಮಿ ಚಟುವಟಿಕೆಗಿಂತಲೂ ಅಪಾಯಕಾರಿಯಾಗಿದೆ. ಇಂಥಹ ಕೋಮುವಾದಿ, ರಾಷ್ಟ್ರದ್ರೋಹಿ ಚಟುವಟಿಕೆಗಳು ಮುಂದುವರಿಯದಂತೆ ತಡೆಯದಿದ್ದರೆ ಸಮಾನ ಮನಸ್ಕರೆಲ್ಲ ಒಟ್ಟಾಗಿ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಕೆ. ಜಯರಾಮ್, ಬಿ.ಎಸ್.ಪಿ ತಾಲ್ಲೂಕು ಅಧ್ಯಕ್ಷ ರವೂಫ್ ಖಾನ್, ರಾಜ್ಯ ಜನಶಕ್ತಿ ಮುಖಂಡ ಗೌಸ್ ಮೊಹಿಯುದ್ದೀನ್, ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಿರುಗುಂದ ಅಬ್ಬಾಸ್, ಪ.ಜಾ. ಮತ್ತು ಪ.ಪಂಗಡಗಳ ಒಕ್ಕೂಟದ ಕಾರ್ಯದರ್ಶಿ ಕೆ.ಕೆ. ರಾಮಯ್ಯ, ಮುಖಂಡರಾದ ಉದುಸೆ ಮಂಜಯ್ಯ, ಬೆಟ್ಟಗೆರೆ ಶಂಕರ್, ಝಾಕಿರ್ ಹುಸೇನ್, ದಾರದಹಳ್ಳಿ ಗ್ರಾ.ಪಂ. ಸದಸ್ಯ ರಜಾಕ್, ಎ.ಸಿ.ಅಯ್ಯೂಬ್, ದೇವರುಂದ ಅಬ್ಬಾಸ್ ಉಪಸ್ಥಿತರಿದ್ದರು.
ವರದಿ: ಕಿರುಗುಂದ ರಫೀಕ್

ಮೂಡಿಗೆರೆ: ಆಲ್ದೂರಿನ ಹವಳ್ಳಿ ವೃತ್ತಕ್ಕೆ ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಬೇಕೆಂದು ಸಿಪಿಐ ಆಲ್ದೂರು ವಲಯದ ಕಾರ್ಯದರ್ಶಿ ಎನ್. ರಾಜು ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ತೀರ್ಮಾನಿಸಿ ನಿರ್ಣಯಿಸಿರುವ ಅಂಬೇಡ್ಕರ್ ವೃತ್ತವನ್ನು ಕೆಲವು ದಲಿತ ವಿರೋಧಿ ಶಕ್ತಿಗಳು ಅಡ್ಡಿಪಡಿಸಿ ಶಾಂತಿ, ನೆಮ್ಮದಿಗೆ ಭಂಗವುಂಟುಮಾಡಿ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಲ್ದೂರು ಪಟ್ಟಣದಲ್ಲಿರುವ ಎಲ್ಲ ವರ್ಗದ ಜನರೂ ಪರಸ್ಪರ ಸಾಮರಸ್ಯದಿಂದ ಬದುಕುವಂತಹ ವಾತಾವರಣ ನಿರ್ಮಿಸಬೇಕಿದೆ. ಭಗವಾಧ್ವಜದ ಹೆಸರಲ್ಲಿ ಶಾಂತಿ ಕದಡಲು ಯತ್ನಿಸಿರುವ ಕಿಡಿಗೇಡಿಗಳ ಕ್ರಮವನ್ನು ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.

ಉಡುಪಿ: ಚುನಾವಣೆಗಿಂತ ಮೊದಲು ಎರಡು ರು. ಗೆ ಅಕ್ಕಿ ಕೊಡುವುದಾಗಿ ಘೋಷಿಸಿದ ಬಿಜೆಪಿ, ಚುನಾವಣೆಯ ಬಳಿಕ ತಾನು ಮತದಾರರಿಗೆ ನೀಡಿದ ವಚನವನ್ನು ಮರೆತಿದೆ. ವಚನ ಬ್ರಷ್ಟವಾಗಿದೆ. ಕೇಂದ್ರದ ಕಾಂಗ್ರೆಸ್ ಮತ್ತು ರಾಜ್ಯದ ಬಿಜೆಪಿ ಸರಕಾರದ ಮಂತ್ರಿಗಳೆಲ್ಲರೂ ಒಬ್ಬೊಬ್ಬರಾಗಿಯೇ ಜೈಲು ಸೇರುತ್ತಿದ್ದಾರೆ. ಮುಂದಿನ ಸರದಿ ಕೇಂದ್ರದ ವಿದೇಶಾಂಗ ಸಚಿವರಾದ ಎಸ್.ಎಂ.ಕೃಷ್ಣ ಅವರದು. ಅಕ್ರಮ ಗಣಿ ಹಗರಣದಲ್ಲಿ ಆರೋಪಿಯಾಗಿರುವ ಅವರು ಇನ್ನು ಮಂತ್ರಿಯಾಗಿ ಮುಂದುವರಿಯುವುದು ಸರಿಯಲ್ಲ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಮ್ರೇಡ್ ಬಿ.ಮಾಧವ ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದ ಹರ್ ಕಿಶನ್ ಸಿಂಗ್ಹ್ ಸುರ್ಜಿತ್ ವೇದಿಕೆಯಲ್ಲಿ ಸಿಪಿಐಎಂ ಪಕ್ಷದ ಉಡುಪಿ ಜಿಲ್ಲಾ ನಾಲ್ಕನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಲ್ ಮಾರ್ಕ್ಸ್ ಮಾತು ನಿಜವಾಗುತ್ತಿದೆ. ಬಂಡವಾಳಶಾಹಿಗಳು ಈಗ "ದ ಕ್ಯಾಪಿಟಲ್" ನ್ನು ಹುಡುಕುತ್ತಿದ್ದಾರೆ. ಬಂಡವಾಳಶಾಹಿ ಸಮಾಜಕ್ಕೆ ಭವಿಷ್ಯವಿಲ್ಲ. ಭವಿಷ್ಯವಿರುವುದು ಕಮ್ಯೂನಿಸಂಗೆ ಆಗಿದೆ. ಬಂಡವಾಳಶಾಹಿ ಸಮಾಜದಲ್ಲಿ ನಡೆಯುತ್ತಿರುವ ಹಿಂಸೆ, ಕ್ರೌರ್ಯ, ಭಯೋತ್ಪಾದನೆ ಇತ್ಯಾದಿಗಳು ಇದನ್ನು ಸಾಬೀತುಪಡಿಸಿದೆ ಎಂದು ಬಿ.ಮಾಧವ ತಿಳಿಸಿದರು.
ಕಾರ್ಮೋಡಗಳೇ ತುಂಬಿದ ಆಕಾಶದಲ್ಲಿ ಕೆಂಪು ನಕ್ಷತ್ರವಾಗಿ, ಆಶಾ ಕಿರಣವಾಗಿ ಸಿಪಿಐಎಂ ಪಕ್ಷವಿದೆ ಎಂದು ಮಾಧವ ಅವರು ಆಶಾವಾದ ವ್ಯಕ್ತಪಡಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಕಾಮ್ರೇಡ್ ಅದಮಾರು ಶ್ರೀಪತಿ ಆಚಾರ್ಯ ಅವರು ಸ್ವಾಗತಿಸಿದರು. ಇವರು ತಮ್ಮ ಸ್ವಾಗತ ಭಾಷಣದಲ್ಲಿ, "ಕಳೆದ ಎರಡು ದಶಕಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮುಖ್ಯವಾಗಿ ದಲಿತ ಮತ್ತು ಹಿಂದುಳಿದ ವರ್ಗಗಳ ನಡುವೆ ಮೂಢನಂಬಿಕೆ, ಅಲ್ಪಸಂಖ್ಯಾತರ ಬಗ್ಗೆ ಸಂದೇಹ, ಸುಳ್ಳು, ಭಯ ಇತ್ಯಾದಿಗಳನ್ನು ನಿರಂತರವಾಗಿ ಬೆಳೆಸುವ ಮೂಲಕ ಜನ ಸಾಮಾನ್ಯರ ಮಧ್ಯೆ ಕೋಮುವಾದಿ ವಿಷವನ್ನು ತುಂಬುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಒಂದು ಕಾಲದಲ್ಲಿ ಗಾಂಧಿವಾದಿಗಳ ನಾಡೆಂದು ಹೆಸರಾಗಿದ್ದ ಈ ಜಿಲ್ಲೆಯಲ್ಲಿ ಈವತ್ತು ಗೋಡ್ಸೆ ವಾದ ಬೆಳೆಯುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಪಿ. ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕೆ.ಶಂಕರ್, ಮಹಾಬಲ ವಡೇರಹೋಬಳಿ ಹಾಗೂ ಯು.ದಾಸ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.