Posts Tagged ‘cm’

ಉಡುಪಿ: ಕುಂದಾಪುರ ತಾಲೂಕಿನ ಅಮಾಸೆಬೈಲ್ ನಲ್ಲಿ ನೂತನವಾಗಿ ನಿರ್ಮಿಸಿದ ಪೋಲಿಸ್ ಠಾಣೆಯನ್ನು ಅ.1 ರಂದು ಬೆಳಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೂತನ ಮೀನು ಮಾರುಕಟ್ಟೆ, ಕೃಷಿ ಮಾರುಕಟ್ಟೆ, ಸಭಾ ಭವನ, ತೊಂಬಟ್ಟು – ಭಾಗೀಮನೆ ಸೇತುವೆ, ಹಿಂದುಳಿದ ವರ್ಗದ ಬಾಲಕಿಯರ ಹಾಸ್ಟೆಲ್ ಮತ್ತು ಜೈವಿಕ ಅನಿಲ ಘಟಕ ಇವುಗಳಿಗೆ ಶಂಕುಸ್ಥಾಪನೆ ಹಾಗೂ ಸೋಲಾರ್ ದೀಪಗಳ ಅನುಷ್ಟಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮಗಳೂ ನಡೆದುವು.
ಜಿಲ್ಲಾಡಳಿತ, ಜಿ.ಪಂ., ಅಮಾಸೆಬೈಲ್ ಗ್ರಾ.ಪಂ., ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ (ರಿ), ಕರ್ಣಾಟಕ ಬ್ಯಾಂಕ್ (ಲಿ) ಸಂಯುಕ್ತವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರ ಮೂರ್ತಿ, ಸಂಸದ ಬಿ.ವೈ.ರಾಘವೇಂದ್ರ, ಎಂಎಲ್ ಸಿ ಕ್ಯಾ.ಗಣೇಶ್ ಕಾರ್ಣಿಕ್, ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ, ಎಸ್ ಪಿ ಡಾ.ಬೋರಲಿಂಗಯ್ಯ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಬಾಗಿಲು ಜಂಕ್ಷನ್ ನಲ್ಲಿ ಸ್ಥಾಪಿಸಿದ ದಿ.ಕರಂಬಳ್ಳಿ ಸಂಜೀವ ಶೆಟ್ಟಿಯವರ ಪ್ರತಿಮೆಯನ್ನು ಅ.1 ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅನಾವರಣಗೊಳಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ನಗರಸಭಾಧ್ಯಕ್ಷ ಕಿರಣ್ ಕುಮಾರ್, ನಗರಸಭಾ ಸದಸ್ಯ ಯಶಪಾಲ್ ಸುವರ್ಣ, ಬಿಜೆಪಿ ನಾಯಕರಾದ ಸೋಮಶೇಖರ್ ಭಟ್, ಉದಯಕುಮಾರ್ ಶೆಟ್ಟಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುರೇಶ್ ನಾಯಕ್ ಕೊಯಿಲಾಡಿ ಮೊದಲಾದವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆಗಿದ್ದರು.

ಉಡುಪಿ: ನಗರದ ಬ್ರಹ್ಮಗಿರಿ ಸಮೀಪದ ನಾಯರ್ಕೆರೆ ಬಳಿಯ ಪ್ರೆಸ್ ಕ್ಲಬ್ ಪಕ್ಕ ನೂತನವಾಗಿ ನಿರ್ಮಿಸಲಾದ ವಾರ್ತಾ ಭವನ (ವಾರ್ತಾ ಮತ್ತು ಪ್ರಚಾರ ಇಲಾಖಾ ಕಟ್ಟಡ) ವನ್ನು ಇಂದು ಸಂಜೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ತಾ.ಪಂ.ಅಧ್ಯಕ್ಷ ದೇವದಾಸ ಹೆಬ್ಬಾರ್, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ, ವಾರ್ತಾಧಿಕಾರಿ ಎಂ.ಜುಂಜಣ್ಣ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಅಕ್ಟೋಬರ್ 1 ರಂದು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆ ದಿನದ ಕಾರ್ಯಕ್ರಮಗಳ ಬಗ್ಗೆ ಕೆಲವೊಂದು ಗೊಂದಲ ನಿರ್ಮಾಣವಾಗಿರುವುದು ಮತ್ತು ಉಡುಪಿ ಶಾಸಕ ರಘುಪತಿ ಭಟ್ ಬಗ್ಗೆ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಎ.ಜಿ.ಕೊಡ್ಗಿ ಅಸಮಾಧಾನಗೊಂಡಿರುವುದು ಬಹಿರಂಗಕ್ಕೆ ಬಂದಿದೆ.
ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.ಜಿ.ಕೊಡ್ಗಿ ನಡೆಸಿದ
ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ಬೆಳಕಿಗೆ ಬಂತು.
ಅಕ್ಟೋಬರ್ ಒಂದರಂದು ಮುಖ್ಯಮಂತ್ರಿಗಳಿಗೆ ಬೇರೆ ಕಾರ್ಯಕ್ರಮ ನಿಗದಿಯಾಗಿತ್ತು. ನಮ್ಮ ಉಡುಪಿಯ ಕಾರ್ಯಕ್ರಮಗಳಿಗೆ ಅವರು ಮೊದಲು ಒಪ್ಪಿಗೆ ನೀಡಿರಲಿಲ್ಲ. ತಾನು ಒತ್ತಡ ಹಾಕಿದ ಬಳಿಕ ಅವರ ನಿಗದಿತ ಕಾರ್ಯಕ್ರಮವನ್ನು ಮುಂದೂಡಿ, ಉಡುಪಿ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಿದರು. ಆ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ ಮುಖ್ಯಮಂತ್ರಿಗಳು ನೇರವಾಗಿ
ಅಮಾಸೆಬೈಲುವಿಗೆ ಆಗಮಿಸಿ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಇದೀಗ ಶಾಸಕ ಭಟ್ ಅವರಿಂದಾಗಿ ಶೆಟ್ಟರ್ ಅವರ ಬೆಳಗ್ಗಿನ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮೊದಲಿಗೆ ಉಡುಪಿಯಲ್ಲಿ ಖಾಸಗಿ
ಕಾರ್ಯಕ್ರಮವೊಂದರಲ್ಲಿ ಶೆಟ್ಟರ್ ಅವರು ಭಾಗವಹಿಸಬೇಕಾಗಿದೆ. ಇದರಿಂದಾಗಿ
ಗೊಂದಲವುಂಟಾಗಿದೆ ಎಂದು ಕೊಡ್ಗಿ ಹೇಳಿಕೊಂಡರು.
ಜಗದೀಶ್ ಶೆಟ್ಟರ್ ಅವರು ಬಜಪೆಯಿಂದ ರಸ್ತೆ ಮೂಲಕ ಉಡುಪಿಗೆ ಆಗಮಿಸುತ್ತಾರೋ, ಹೆಲಿಕಾಫ್ಟರ್ ಮೂಲಕ ಆಗಮಿಸುತ್ತಾರೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ
ಅಮಾಸೆಬೈಲುವಿಗೆ ಯಾವುದರ ಮೂಲಕ ಆಗಮಿಸುತ್ತಾರೆ ಎನ್ನುವುದೂ ಇನ್ನಷ್ಟೇ
ಸ್ಪಷ್ಟವಾಗಬೇಕಾಗಿದೆ. ಅಮಾಸೆಬೈಲು ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಎಂದು ನಿರ್ಧರಿಸಲಾಗಿದೆ. ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ 10 ಗಂಟೆಗೆ ಅಮಾಸೆಬೂಲು ಕಾರ್ಯಕ್ರಮಕ್ಕೆ ಆಗಮಿಸಲು ಸಿಎಂ ಅವರಿಗೆ ಕಷ್ಟ ಎಂದು ಕೊಡ್ಗಿ ಆತಂಕ
ವ್ಯಕ್ತಪಡಿಸಿದರು.
ಅಮಾಸೆಬೈಲಿನಲ್ಲಿ ನಡೆಯುವುದು ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಪೋಲೀಸ್ ಇಲಾಖೆ ಮತ್ತು ಗ್ರಾ.ಪಂ.ಗಳ ಕಾರ್ಯಕ್ರಮ. 9 ಗಂಟೆಗೆ ಉಡುಪಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಅವರೇನೋ ಅಮಾಸೆಬೈಲ್ ಗೆ ಹೆಲಿಕಾಫ್ಟರ್ ನಲ್ಲಿ
ಬಂದಿಳಿಯಬಹುದು. ಆದರೆ, ಇದೇ ಸಮಯಕ್ಕೆ ಅಧಿಕಾರಿಗಳು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವಿಸಿವೆ ಎಂದು ಕೊಡ್ಗಿ ಕಳವಳ ವ್ಯಕ್ತಪಡಿಸಿದರು. ಸಿಎಂ ಉಡುಪಿಗೆ ಆಗಮಿಸುವಾಗ ಜಿಲ್ಲಾಡಳಿತದ ಅಧಿಕಾರಿಗಳು ಉಡುಪಿಯಲ್ಲಿ ಅವರ ಜೊತೆ ಇರಲೇ ಬೇಕಾಗುತ್ತದೆ. 9 ಗಂಟೆಗೆ ಉಡುಪಿಯಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಏನೋ ಹೆಲಿಕಾಫ್ಟರ್ ನಲ್ಲಿ ತಡವಾಗಿ ಅಮಾಸೆಬೈಲಿಗೆ ಆಗಮಿಸಿ
ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಆದರೆ, ಇದೇ ಸಮಯಕ್ಕೆ ಡಿಸಿ, ಜಿ.ಪಂ.ಸಿಇಓ, ಎಸ್ ಪಿ ಮೊದಲಾದವರು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ?, ಅಮಾಸೆಬೈಲಿನಲ್ಲಿ
ನಡೆಯುತ್ತಿರುವುದು ಜಿಲ್ಲಾಡಳಿತ, ಜಿ.ಪಂ., ಪೋಲೀಸ್ ಇಲಾಖೆಯದೇ ಕಾರ್ಯಕ್ರಮ ಅಲ್ಲವೇ ಎಂದು ಎ.ಜಿ.ಕೊಡ್ಗಿ ಪ್ರಶ್ನಿಸಿದರು.
ಉಡುಪಿ ಶಾಸಕರಾದ ರಘುಪತಿ ಭಟ್ ರವರು ಅ.1 ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವಂತೆ
ಮಾಡಿರುವುದರಿಂದಾಗಿ ಗೊಂದಲವಾಗಬಹುದು ಎಂಬ ಬಗ್ಗೆ ಈಗಾಗಲೇ ತಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನಿರ್ಮಾಣಗೊಂಡಿರುವ ಸಣ್ಣದೊಂದು ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಲಯದ ಐಜಿಪಿ ಅವರು ಸಿಎಂ ಜೊತೆಗೆ ಮಾತಾಡಲಿದ್ದಾರೆ ಎಂದು ಕೊಡ್ಗಿ ತಿಳಿಸಿದರು.
ಅ.1 ರಂದು ಅಮಾಸೆಬೈಲು ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಗ್ರಾಮವೊಂದನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವುದು ರಾಜ್ಯದಲ್ಲಿಯೇ ಪ್ರಥಮ ಎಂದು ಕೊಡ್ಗಿ
ಮಾದ್ಯಮಗೋಷ್ಟಿಯಲ್ಲಿ ತಿಳಿಸಿದರಲ್ಲದೆ, ಈ ಬಗ್ಗೆ ಮಾಹಿತರಿಯನ್ನು ನೀಡಿದರು.

ಉಡುಪಿ: ಉಡುಪಿ ನಗರದ ಬ್ರಹ್ಮಗಿರಿ ಸಮೀಪದ ನಾಯರ್ ಕೆರೆಯಲ್ಲಿ ನೂತನವಾಗಿ ನಿರ್ಮಿಸಿದ ವಾರ್ತಾ ಭವನವನ್ನು ಅಕ್ಟೋಬರ್ 1 ರಂದು ಅಪರಾಹ್ನ ಗಂಟೆ 3.45 ಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಿತ ಅನೇಕ ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ವಾರ್ತಾಧಿಕಾರಿ ಜುಂಜಣ್ಣ ತಿಳಿಸಿದ್ದಾರೆ.

ಉಡುಪಿ: ಅಬಕಾರಿ ಇಲಾಖೆಯ ಕುಂದಾಪುರ ವಲಯ ನಿರೀಕ್ಷಕಿ ಸುಭೋದಾ ಸಿ.ನಾಯಕ್
ನೇತೃತ್ವದಲ್ಲಿ ಇತ್ತೀಚೆಗೆ ಕುಂದಾಪುರ ವ್ಯಾಪ್ತಿಯಲ್ಲಿ ನಕಲಿ ಮದ್ಯ ಸರಬರಾಜು ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಆರೋಪಿಗಳೊಂದಿಗೆ ಶಾಮೀಲಾಗಿ ಭಾರೀ ಡೀಲ್ ಕುದುರಿಸಿರುವ ಬಗ್ಗೆ ಶಂಕೆಗಳಿವೆ. ಆದುದರಿಂದ ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಜುಲೈ ತಿಂಗಳಲ್ಲಿ ಕುಂದಾಪುರ ತಾಲೂಕಿನ ಹೆಮ್ಮಾಡಿ ಬಳಿ ದಾಳಿ ನಡೆಸಿದ ಸುಭೋದ ನಾಯಕ್ ನೇತೃತ್ವದ ತಂಡ, ಅಂದು ಪತ್ತೆಯಾದ ಎಲ್ಲಾ ಅಕ್ರಮ ಮದ್ಯವನ್ನು ದಸ್ತಗಿರಿ ಮಾಡದೆ, ಕೇವಲ ಕಾಲಿ ಬಾಟಲ್ ಮತ್ತು ಲೇಬಲ್ ಗಳನ್ನು ಮಾತ್ರವೇ ವಶಪಡಿಸಿಕೊಂಡು ಪ್ರಕರಣ
ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ, ಅಕ್ರಮ ಮದ್ಯ ಪ್ರಕರಣದ ಪ್ರಮುಖ ಆರೋಪಿಯನ್ನು ರಕ್ಷಿಸಲಾಗಿದೆ ಎಂದು ಜಯನ್ ಅನುಮಾನವಿದೆ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಮಾಡುವ ಜಾಲದ ಪ್ರಮುಖ ವ್ಯಕ್ತಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಗೋಳಿಯಂಗಡಿಯಲ್ಲಿ ಬಾರ್ ನಡೆಸುವ ವ್ಯಕ್ತಿಯೋರ್ವ ಮದ್ಯಪ್ರವೇಶ ಮಾಡುವ ಮೂಲಕ, ಅಬಕಾರಿ ನಿರೀಕ್ಷಕಿ ಸುಭೋದಾ ನಾಯಕ್ ಜೊತೆ ಡೀಲ್ ಕುದುರಿಸಿ ಪ್ರಮುಖ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಇಂಥ ಭ್ರಷ್ಟ ಅಬಕಾರಿ ನಿರೀಕ್ಷಕಿಯನ್ನು ಕೂಡಲೇ ಅಮಾನತುಪಡಿಸಬೇಕೆಂದೂ ಜಯನ್ ಮಲ್ಪೆ ಅಬಕಾರಿ ಇಲಾಖಾ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಕುಂದಾಪುರ ತಾಲೂಕಿನಾದ್ಯಂತ ನಕಲಿ ಮದ್ಯ ಮಾರಾಟ ಮತ್ತು ಗೋವಾ ಮದ್ಯ ಸರಬರಾಜು ನಿರಂತರವಾಗಿ ನಡೆಯುತ್ತಿದೆ. ಈ ಅಕ್ರಮ ದಂಧಗೆ ಅಬಕಾರಿ ನಿರೀಕ್ಷಕಿ ಪರೋಕ್ಷವಾಗಿ ಸಹಕರಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದುದರಿಂದ ತಕ್ಷಣವೇ ಕುಂದಾಪುರ ವಲಯ ಕ್ಕೆ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯನ್ನು ನೇಮಕ ಮಾಡುವಂತೆಯೂ ಜಯನ್ ಮಲ್ಪೆ ಇಲಾಖಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಬೃಹತ್ ಅಕ್ರಮ ಮದ್ಯ ಪ್ರಕರಣವನ್ನು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸದೇ ಇರುವುದು ಸುಭೋದಾ ನಾಯಕ್ ಅವರ ಭ್ರಷ್ಟತನಕ್ಕೆ ಸಾಕ್ಷಿಯಾಗಿದೆ. ಜುಲೈ ತಿಂಗಳಲ್ಲಿ ಅಬಕಾರಿ ಆಯುಕ್ತರು ಹಾಗೂ ಮಂಗಳೂರು ವಿಭಾಗದ ಪ್ರಭಾರ ಅಬಕಾರಿ ಜಂಟಿ ಆಯುಕ್ತರುಗಳ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸಾಂಕೇತಿಕವಾಗಿ ಹೆಮ್ಮಾಡಿ ಬಳಿ ದಾಳಿ ನಡೆಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಯನ್ ಮಲ್ಪೆ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಮತದಾನದ ದಿನವಾದ ಇಂದು ಮತ್ತು ನಿನ್ನೆ ಸಹ ಮಣಿಪಾಲದಿಂದ ಪ್ರಕಟವಾಗುವ ಪ್ರತಿಷ್ಟಿತ ‘ಉದಯವಾಣಿ’ ದಿನಪತ್ರಿಕೆಯು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಕಾಸಿಗಾಗಿ ಸುದ್ದಿ ಪ್ರಕಟಿಸಿ ಪತ್ರಿಕಾಧರ್ಮಕ್ಕೆ ಅಪಚಾರವೆಸಗಿದೆ.
ಮಾ.18 ರ ಉದಯವಾಣಿಯ ಪುಟ 12 ರಲ್ಲಿ ‘ಸುನಿಲ್ ಕುಮಾರ್ ಗೆ ಎಲ್ಲೆಡೆ ಭಾರೀ ಬೆಂಬಲ’ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಈ ಸುದ್ದಿ ಕಾಸು ಪಡೆದುಕೊಂಡು ಪ್ರಕಟಿಸಿದ ಸುದ್ದಿ ಎನ್ನುವುದನ್ನು ಯಾರು ಬೇಕಾದರೂ ಹೇಳಬಹುದು.
ಮಾ.17 ರ ಉದಯವಾಣಿಯಲ್ಲಿ ಕಾಂಗ್ರೆಸ್ ನಿಂದ ಕಾಸು ಪಡೆದುಕೊಂಡು ಪ್ರಕಟಿಸಿದ ಎರಡು ಸುದ್ದಿಗಳಿವೆ. ಒಂದು, ‘ಜಯಪ್ರಕಾಸ್ ಹೆಗ್ಡೆ ಪರ ಜನಬೆಂಬಲದ ಮಹಾಪೂರ’, ಇನ್ನೊಂದು, ‘ಕಾಂಗ್ರೆಸ್ ಸರಕಾರದ ಅಭಿವೃದ್ದಿ ಕಾರ್ಯಕ್ರಮ ನಮಗೆ ಶ್ರೀರಕ್ಷೆ. – ಆಸ್ಕರ್ ಫೆರ್ನಾಂಡಿಸ್’.
ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಗೆಲುವಿಗಾಗಿ, ಅಧಿಕಾರಕ್ಕಾಗಿ ಅನೈತಿಕ ಮಾರ್ಗ ಹಿಡಿದಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ? ಈ ಎರಡೂ ರಾಜಕೀಯ ಪಕ್ಷಗಳು ದಿನ ಪತ್ರಿಕೆಗಳಿಗೆ ಮತ್ತು ವಾರ ಪತ್ರಿಕೆಗಳಿಗೆ ಹಾಗೂ ಸ್ಥಳೀಯ ಕೆಲವು ಖಾಸಗಿ ಟಿವಿ ಛಾನೆಲ್ ಗಳಿಗೆ ಅನಧಿಕೃತವಾಗಿ ವಿತರಿಸಿದ ಹಣ ಕೆಲವು ಲಕ್ಷಗಳು. ಈ ಬಗ್ಗೆ ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ನಡೆಸುವ ದಿಟ್ಟತನ ಪ್ರದರ್ಶಿಸಬೇಕೆಂದು www.udupibits.com ಒತ್ತಾಯಿಸಿದೆ.

ಉಡುಪಿ: ಅಧಿಕಾರ ದಾಹ ಮತ್ತು ಹಣದ ವ್ಯಾಮೋಹದಿಂದಾಗಿ ಸದಾನಂದ ಗೌಡರು ಉಡುಪಿ- ಚಿಕ್ಕ ಮಗಳೂರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ. ಇದರಿಂದಾಗಿ ಮರು ಚುನಾವಣೆ ನಡೆಯುತ್ತಿದೆ. ಜನರ ತೆರಿಗೆ ಹಣ ಈ ಚುನಾವಣೆಗಾಗಿ ವ್ಯರ್ಥವಾಗುತ್ತಿದ್ದು, ಇದಕ್ಕೆ ಸದಾನಂದ ಗೌಡರೇ ನೇರ ಹೊಣೆಗಾರರು. ದೇವೇಗೌಡರ ಮಾರ್ಗದರ್ಶನದಲ್ಲಿ ಸದಾನಂದ ಗೌಡರು ಆಡಳಿತ ನಡೆಸುತ್ತಿದ್ದಾರೆ ಎಂದು ಸಂಯುಕ್ತ ಜನತಾದಳ (ಜೆಡಿಯು) ಅಭ್ಯರ್ಥಿ ಚಿಕ್ಕ ಮಗಳೂರಿನ ಕೆ.ಭರತೇಶ್ ಆರೋಪಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾ.1 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಭರತೇಶ್ ಈ ಹಿಂದೆ 10 ವರ್ಷಗಳ ಕಾಲ ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ, ಒಂದು ವರ್ಷ ಕಾಲ ಚಿಕ್ಕ ಮಗಳೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದವರು ಬಳಿಕ ಜೆಡಿಯು ಪಕ್ಷಕ್ಕೆ ಸೇರಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಕಾಫಿ ಪ್ಲಾಂಟರ್ ಆಗಿರುವ ಭರತೇಶ್, ತಾನು ಚುನಾವಣೆಯಲ್ಲಿ ಗೆದ್ದರೆ ರಯತರ, ಯುವಕರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಿರುವುದಾಗಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರು ಸಿ.ಟಿ.ರವಿ, ಅನಂತ ಕುಮಾರ್ ಮೊದಲಾದವರೊಂದಿಗೆ ಸೇರಿಕೊಂಡು ಧರ್ಮ- ಧರ್ಮಗಳ ನಡುವೆ ಬೆಂಕಿ ಹಚ್ಚಿ, ವಿಷ ಬೀಜ ಬಿತ್ತಿ ಕೋಮು ಗಲಭೆ ನಡೆಸುತ್ತಾರೆ. ಅಧರ್ಮದ ರಾಜಕಾರಣ ನಡೆಸುತ್ತಾರೆ. ಪಕ್ಷದ ಪ್ರಮುಖರ ಮೇಲೆ ಇರುವ ಮೊಕದ್ದಮೆಗಳಿಗೆ `ಬಿ’ ವರದಿ ಸಲ್ಲಿಸಿ ಪ್ರಕರಣಗಳಿಗೆ ಮಂಗಳ ಹಾಡುತ್ತಿದೆ. ಬಹುಕೋಟ್ಯಧಿಪತಿ ಮಂತ್ರಿಗಳೇ ಇರುವ ಸರಕಾರ ಕಣ್ಣು, ಕಿವಿ ಕಳೆದುಕೊಂಡಿದೆ. ಇದೊಂದು ಗೂಂಡಾ ರಾಜ್ಯ ಎಂದು ಭರತೇಶ್ ಅಪಾದಿಸಿದರು.
ದೇವೇಗೌಡ ಏಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತಂದಿದೆ. ಸಮಯ ಸಾಧಕ ರಾಜಕಾರಣಿಯಾಗಿರುವ ದೇವೇಗೌಡರು ಬಿಜೆಪಿಯನ್ನು ಗೆಲ್ಲಿಸಲಿಕ್ಕಾಗಿಯೇ ಎಸ್.ಎಲ್.ಭೋಜೇಗೌಡರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಚುನಾವಣೆಯ ಸಮಯದಲ್ಲಿ ಮಾತ್ರ ಜನರ ನಡುವೆ ಬರ್ತಾರೆ. ಉಳಿದ ಸಮಯದಲ್ಲಿ ಕ್ರಿಕೆಟ್ ನಡೆಸ್ತಾರೆ ಎಂದು ಟೀಕಿಸಿದ ಕೆ.ಭರತೇಶ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಮತದಾರರು ಕಸದ ಬುಟ್ಟಿಗೆ ಎಸೆಯಲಿದ್ದಾರೆ. ಹೊಸ ಶಕ್ತಿಯನ್ನು ಬಯಸುತ್ತಿರುವ ಮತದಾರರ ಜೆಡಿಯು ಪಕ್ಷಕ್ಕೆ ಒಲಿಯಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧ್ಯಮಗೋಷ್ಟಿಯಲ್ಲಿ ಜೆಡಿಯು ರಾಜ್ಯ ಸಂಘಟನಾ ಕಾರ್ಯದರ್ಶಿ ಜಾನ್ ಫ್ರಾನ್ಸಿಸ್ ಫೆರ್ನಾಂಡಿಸ್, ದ.ಕ.ಜಿಲ್ಲಾಧ್ಯಕ್ಷ ಹರೀಶ್ ಆಳ್ವ, ಗದಗ ಜಿಲ್ಲಾಧ್ಯಕ್ಷ ಬಸವರಾಜ ದೇಸಾಯಿ, ಚಿಕ್ಕ ಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಪಿ.ಮಂಜುನಾಥ ಪಟೇಲ್, ಇತರ ಮುಖಂಡರುಗಳಾದ ಲತಾ ಉದಯ ಶೆಟ್ಟಿ, ಝಮಾನ್, ದಿನೇಶ್ ಶೆಟ್ಟಿ, ವಿಶಾಂತ್ ಡಿ’ ಸೋಜ, ಸುಪ್ರಿತ್ ಕುಮಾರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷ ಮತ್ತು ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಅವರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಮಲ್ಪೆಯಲ್ಲಿ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುನಿಲ್ ಕುಮಾರ್, ಪಕ್ಷದ ಇತರ ಮುಖಂಡರೊಂದಿಗೆ ಸಾವಿರಾರು ಕಾರ್ಯಕರ್ತರ ಜಯಕಾರದ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಬಹಿರಂಗ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು.
ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ ಕುಮಾರ್, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುನಿಲ್ ಕುಮಾರ್ ಜೊತೆಗೆ ಇದ್ದರು.
ಬಹಿರಂಗ ಸಮಾವೇಶದಲ್ಲಿ ಸಿಎಂ ಸದಾನಂದ ಗೌಡ, ಅನಂತಕುಮಾರ್, ಈಶ್ವರಪ್ಪ, ರಾಘವೇಂದ್ರ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ನಳಿನ್ ಕುಮಾರ್ ರೈ ಕಟೀಲ್, ಶಾಸಕರುಗಳಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಿ.ಟಿ.ರವಿ, ಕುಮಾರಸ್ವಾಮಿ, ಜೀವರಾಜ್, ಬಿ.ಎಸ್.ಸುರೇಶ್, ಎಂಎಲ್ ಸಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎ.ಜಿ.ಕೊಡ್ಗಿ, ಸುಲೋಚನಾ ಭಟ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಚಿಕ್ಕ ಮಗಳೂರು ಜಿಲ್ಲಾಧ್ಯಕ್ಷ ಪ್ರಾಣೇಶ್, ಭಾನುಪ್ರಕಾಶ್, ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ: ರಾಜ್ಯ ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳ ರೂವಾರಿ, ರಾಜ್ಯ ಬಿಜೆಪಿ ಸರಕಾರಗಳ ಬಜೆಟ್ ಗಳ ಶಿಲ್ಪಿ, ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ವೇದವ್ಯಾಸ ಶ್ರೀನಿವಾಸ (ವಿ.ಎಸ್.) ಆಚಾರ್ಯ ಫೆ.14 ರಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಸಮಾರಂಭವೊಂದರ ವೇದಿಕೆಯೇರುವ ಹೊತ್ತಿನಲ್ಲಿ ಕುಸಿದು ಬಿದ್ದವರು ಮತ್ತೆ ಮೇಲೇಳಲೇ ಇಲ್ಲ.
ಉಡುಪಿಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ ಡಾ.ವಿ.ಎಸ್.ಆಚಾರ್ಯರ ಮೃತ ಶರೀರವನ್ನು, ಆಚಾರ್ಯರ ಕರ್ಮಭೂಮಿ ಉಡುಪಿಯ ನೂತನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಯಿತು. ಸಾವಿರಾರು ಜನರು ಅವರ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದರು. ರಾತ್ರಿಯೇ, ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದು, ಫೆ.15 ರ 12.20 ಕ್ಕೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ
ಅಂತ್ಯ ಸಂಸ್ಕಾರ ನಡೆಯಿತು. ಮಕ್ಕಳಾದ ಡಾ.ಕಿರಣ್ ಹಾಗೂ ರವಿರಾಜ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಎಲ್.ಕೆ.ಅಡ್ವಾನಿ, ಅನಂತ ಕುಮಾರ್, ಸದಾನಂದ ಗೌಡ, ಯಡಿಯೂರಪ್ಪ, ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಬಿ.ಜನಾರ್ದನ ಪೂಜಾರಿ, ಆರ್ಎಸ್ಎಸ್ ನ ಸಂತೋಷ್, ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಅನೇಕ ಮಂದಿ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಚಿತ್ರಗಳು: ಶ್ರೀರಾಮ ದಿವಾಣ.