ಉಡುಪಿ: ಕಾಳಿಂಗ ಮರ್ದನ ಕೃಷ್ಣನ ಮೂರ್ತಿಯನ್ನು ಉಡುಪಿ ಜಿಲ್ಲಾಡಳಿತ ಎಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಿತ್ತೋ ಅದೇ ಸ್ಥಳದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ನೇತೃತ್ವದ ಜಿಲ್ಲಾಡಳಿತ ಯಾವ ನಾಚಿಕೆಯೂ ಇಲ್ಲದೆ ನಂಗಾನಾಚ್ ಉತ್ಸವವನ್ನು ನಡೆಸುತ್ತಿದೆ. ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಸಾಥ್ ನೀಡಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತಿಯ, ಸುರಕ್ಷಿತ ಪ್ರದೇಶವಾದ ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡಿನಲ್ಲಿ ಕಾಳಿಂಗ ಮರ್ದನ ಕೃಷ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಲು ಈ ಹಿಂದೆ ಜಿಲ್ಲಾಡಳಿತ ನಿರ್ಧರಿಸಿತ್ತು. ಇದೀಗ ಅದೇ ಸ್ಥಳದಲ್ಲಿ ‘sprining zouk-2012′ (ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ) ಎಂಬ ಹೆಸರಿನಲ್ಲಿ ರೇವ್ ಪಾರ್ಟಿ (ನಂಗಾನಾಚ್) ಹಮ್ಮಿಕೊಂಡಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು 3 w concepts ಎಂಬ ಖಾಸಗಿ ಸಂಸ್ಥೆ ಐಲ್ಯಾಂಡಲ್ಲಿ ಈ ಮೂರು ದಿನಗಳ ಕಾಲದ ಈ ಉತ್ಸವವನ್ನು ಆಯೋಜಿಸಿದೆ. 3,500 ರು. ಮೊತ್ತದ 2,500 ಟಿಕೇಟ್ ಗಳನ್ನು ಸಂಘಟಕರು ಮಾರಾಟ ಮಾಡಿದ್ದು, ಇಷ್ಟೂ ಜನರು ಇದೀಗ ಐಲ್ಯಾಂಡಿನೊಳಗೆ ಪ್ರಪಂಚವನ್ನೇ ಮರೆತು ಮೋಜು ಮಸ್ತಿಯಲ್ಲಿ ಮುಳುಗೇಳುತ್ತಿದ್ದಾರೆ.
ಉತ್ಸವದಲ್ಲಿ ಭಾಗವಹಿಸುತ್ತಿರುವವರೆಲ್ಲರೂ ಜೋಡಿಗಳಾಗಿದ್ದು, ಇವರು ಇಲ್ಲಿಗೆ ಬರುವಾಗಲೇ ತಮ್ಮ ಬ್ಯಾಗ್ ಗಳಲ್ಲಿ ಗಾಂಜಾ ತಂದಿರುವುದು, ಟೂ ಪೀಸ್ ಧರಿಸಿ ಬಹಿರಂಗವಾಗಿಯೇ ಕುಣಿದು ಕುಪ್ಪಳಿಸಿರುವುದು ಇತ್ಯಾದಿಗಳು ಪ್ರವಾಸೋದ್ಯಮದ ಅಭಿವೃದ್ದಿ ಎಂದರೆ ಹೈಟೆಕ್ ವೇಶ್ಯಾವಾಟಿಕೆ ಎಂಬ ಚಿತ್ರಣವನ್ನು ಮೂಡಿಸಿದೆ.
ಫೆ.4 ರಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ಡಾ.ರೇಜು, ರಾತ್ರಿ ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ವ್ಯವಸ್ಥೆ ಇರುತ್ತದೆ, ಇದೇ ಸಮಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದರು. ಆದರೆ, ಮೊದಲ ದಿನವಾದ ಫೆ.4 ರಂದು ವಿದೇಶಿ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನ ಆರಂಭಿಸಿದ್ದೇ ರಾತ್ರಿ 11 ಗಂಟೆಗೆ. ಬೆಳಗ್ಗೆ 7 ಗಂಟೆಯ ವರೆಗೂ ವಿದ್ಯುದ್ದೀಪಗಳು ಉರಿಯುತ್ತಲೇ ಇತ್ತು ಮತ್ತು ವಿದೇಶಿ ಹಾಗೂ ದೇಶದ ಹೈಟೆಕ್ ನಗರಗಳ ಶ್ರೀಮಂತ ಯುವ ಜೋಡಿಗಳು ರಾತ್ರಿಯಿಡೀ ನಾಚಿಕೆ ಇಲ್ಲದೆ ನಂಗಾನಾಚ್ ನಲ್ಲಿ ತೊಡಗಿದ್ದರು. ಇವರಿಗೆ ಪೋಲೀಸ್ ರಕ್ಷಣೆಯನ್ನೂ ಒದಗಿಸಲಾಗಿತ್ತು.
ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಬೇಟೆ ನೃತ್ಯ, ಯಕ್ಷಗಾನ ಇತ್ಯಾದಿಗಳನ್ನು ಪ್ರದರ್ಶಿಸುವ ತಂಡಗಳು ಹೇಳುವವರು, ಕೇಳುವವರು ಇಲ್ಲದೆ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಾ ಐಲ್ಯಾಂಡಲ್ಲಿ ಸುತ್ತಾಡುತ್ತಿತ್ತು. ಜಿಲ್ಲಾಡಳಿತದ ನಿಜವಾದ ಆಸಕ್ತಿ ಏನೂ ಎನ್ನುವುದಕ್ಕೆ ಬೇರೆ ಸಾಕ್ಷಿಯೇ ಬೇಕೇ ?
ಇದೀಗ ಬಂದ ಮಾಹಿತಿಗಳ ಪ್ರಕಾರ ಮತ್ತೆ ಅಧಿಕೃತವಾಗಿಯೇ ಐಲ್ಯಾಂಡ್ ನೊಳಗೆ ಲೋಡ್ ಗಟ್ಟಲೆ ಮದ್ಯವನ್ನು ಜಿಲ್ಲಾಡಳಿತವೇ ನೇರವಾಗಿ ಅನ್ ಲೋಡ್ ಮಾಡಿದೆ. ಎಲ್ಲವನ್ನೂ ಮರೆತು ಟೂ ಪೀಸ್ ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಯುವ ಜೋಡಿಗಳು ಗಾಂಜಾದ ಜೊತೆಗೆ ಮದ್ಯವನ್ನೂ ಕುಡಿಯುತ್ತಾ …ಮರ್ಧನದಲ್ಲಿ ಸ್ವರ್ಗ ಸುಖ ಕಾಣಲಿ ಎಂಬುದು ಜಿಲ್ಲಾಡಳಿತದ ಮತ್ತು ರಾಜ್ಯ ಸರಕಾರದ ಉದ್ದೇಶ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಪಬ್ ನಲ್ಲಿ ಯುವತಿಯರು ಮದ್ಯ ಸೇವಿಸುತ್ತಿದ್ದಾರೆ ಎಂಬುದನ್ನೇ ಮುಖ್ಯ ದಾಳವಾಗಿ ಬಳಸಿಕೊಂಡು ಪಬ್ ಗೆ ದಾಳಿ ನಡೆಸಿ ಯುವತಿಯರ ಮೇಲೆ ಹಲ್ಲೆ ನಡೆಸಿ ಪೌರುಷ ಮೆರೆದ ಸಂಘ ಪರಿವಾರ ಈಗ ಮಾತನಾಡದೆ ಮೌನವಹಿಸಿದೆ, ಕಣ್ಣಿದ್ದೂ ಕುರುಡಾಗಿದೆ, ಕಿವಿ ಇದ್ದೂ ಕಿವುಡಾಗಿದೆ. ಬುದ್ದಿವಂತರ ಜಿಲ್ಲೆಯ ಬುದ್ದಿವಂತ ಜನರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಕುಳಿತುಬಿಟ್ಟಿದ್ದಾರೆ.
- rave party1
- rave party 14

